ಋತುಚಕ್ರ ವೈಜ್ಞಾನಿಕ ಸಹಜ ಪ್ರಕ್ರಿಯೆ: ತಿಪ್ಪಣ್ಣ

| Published : May 30 2024, 12:54 AM IST

ಋತುಚಕ್ರ ವೈಜ್ಞಾನಿಕ ಸಹಜ ಪ್ರಕ್ರಿಯೆ: ತಿಪ್ಪಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಲ್ಲಿ ಮುಟ್ಟು ಅಥವಾ ಋತುಚಕ್ರದ ಕುರಿತು ಕೀಳರಿಮೆ ಭಾವನೆ ಇದ್ದು, ಇದನ್ನು ತೊಡೆದು ಹಾಕಬೇಕು.

ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ । ವಸತಿ ನಿಲಯಗಳ ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕೊಪ್ಪಳ

ವಿದ್ಯಾರ್ಥಿಗಳಲ್ಲಿ ಮುಟ್ಟು ಅಥವಾ ಋತುಚಕ್ರದ ಕುರಿತು ಕೀಳರಿಮೆ ಭಾವನೆ ಇದ್ದು, ಇದನ್ನು ತೊಡೆದು ಹಾಕಬೇಕು ಮತ್ತು ಅದೊಂದು ವೈಜ್ಞಾನಿಕ ಸಹಜ ಕ್ರಿಯೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಿಗಿ ಹೇಳಿದರು.

ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಶಿಶು ಅಭಿವೃದ್ಧಿ ಯೋಜನಾ ಕಾರ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ 1 ಮತ್ತು 2 ಕೇಂದ್ರದ ವಸತಿ ನಿಲಯಗಳಲ್ಲಿ ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಟ್ಟು ಎಂದರೆ ಗುಟ್ಟು ಎಂಬ ಕೀಳರಿಮೆ ನಮ್ಮ ಸಮಾಜದಲ್ಲಿ ಶತಮಾನಗಳಿಂದಲೂ ಇದೆ. ಮುಟ್ಟಾದ ಮಹಿಳೆಯನ್ನು ಮನೆಯಿಂದ ಹೊರಗೆ ಕೂರಿಸುವ ಪದ್ಧತಿ ಇಂದಿಗೂ ಕೆಲವೆಡೆ ಜೀವಂತವಾಗಿದೆ. ಇಂತಹ ಮೂಢನಂಬಿಕೆಗಳನ್ನು ಶಿಕ್ಷಣದಿಂದಲೇ ತಡೆಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ದೈಹಿಕ ಶುಚಿತ್ವ ಅಡಿಯಿಂದ ಮುಡಿಯವರೆಗೂ ಸ್ವಚ್ಛಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತೋರುವರು. ಕೇವಲ ಮುಖವನ್ನು ಮಾತ್ರ ಸೌಂದರೀಕರಣಗೊಳಿಸುವಲ್ಲಿ ಹೆಚ್ಚು ಆಸ್ತರಾಗಿರುತ್ತಾರೆ. ಇದರಿಂದ ಅನಾರೋಗ್ಯದ ಜೊತೆಗೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ದೈಹಿಕ ಬೆಳವಣಿಗೆಗೆ ಹೆಚ್ಚಿನ ಆಸಕ್ತಿ ನೀಡುವುದು ಅಗತ್ಯವಾಗಿದೆ. ಜೊತೆಗೆ ಯೋಗ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಶಿಕ್ಷಣಕ್ಕೆ ಒಲವು ನೀಡಬೇಕೆಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಮಾತನಾಡಿ, ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ರಕ್ತಹೀನತೆಯಿಂದ ಮುಕ್ತರಾಗುವುದು, ಪೌಷ್ಟಿಕ ಉತ್ತಮ ಕಬ್ಬಿಣಾಂಶದ ಆಹಾರ ಹಾಗೂ ಸೊಪ್ಪಿನಂತಹ ಆಹಾರ ಸೇವನೆ ಮಾಡಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ದೊರೆಯುವ ಕಬ್ಬಿಣಾಂಶ ಮಾತ್ರೆಯನ್ನು ಹದಿಹರೆಯ ಕಿಶೋರಿ ಮಕ್ಕಳು ತೆಗೆದುಕೊಳ್ಳುವುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ವಿಶ್ವ ಮುಟ್ಟಿನ ನೈರ್ಮಲ್ಯ ದಿನದಂದು ಉತ್ತಮ ಶಿಕ್ಷಣ ಮತ್ತು ಮುಟ್ಟಿನ ಬಗ್ಗೆ ಜಾಗೃತಿ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಜಯಶ್ರೀ, ಕೊಪ್ಪಳ ಕಿಮ್ಸ್ ಮತ್ತು ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ. ಸುರೇಖಾ ವಿದ್ಯಾರ್ಥಿನಿಯರಿಗೆ ವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆರ್.ಕೆ.ಎಸ್.ಕೆ ಪ್ರೋಗ್ರಾಮ್ ಕೋರ್ಡಿನೇಟರ್ ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಫಾತಿಮಾ, ಸಖಿ ಘಟಕದ ಆಡಳಿತಾಧಿಕಾರಿ ಯಮುನಾ, ಸ್ನೇಹ ಕ್ಲಿನಿಕ್ ಆಪ್ತ ಸಮಾಲೋಚಕರು ಸ್ವರೂಪರಾಣಿ ಸೇರಿದಂತೆ ಮತ್ತಿತರರಿದ್ದರು.