ಡಂಬಳ: ಹೋಬಳಿಯ ಡೋಣಿ ತಾಂಡಾದಲ್ಲಿ ಮಂಗಳವಾರ ಮಧ್ಯರಾತ್ರಿ ಮಾನಸಿಕ ಅಸ್ವಸ್ಥನೊಬ್ಬ ಮನೆ ಮುಂದೆ ಮಲಗಿದ್ದವರ ಮೇಲೆ ದೊಣ್ಣೆಯಿಂದ ಏಕಾಏಕಿ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಆರು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರ್ಜಪ್ಪ ಲಮಾಣಿ (44) ಎಂಬಾತ ಹಲ್ಲೆ ನಡೆಸಿದ ಆರೋಪಿ. ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆಗಳ ಮುಂದೆ ಮಲಗಿದ್ದ ವೇಳೆ ಮಂಗಳವಾರ ರಾತ್ರಿ 1 ಗಂಟೆ ಸುಮಾರಿಗೆ ಹರ್ಜಪ್ಪ ಲಮಾಣಿ ದೊಣ್ಣೆ ಹಿಡಿದು ಏಕಾಏಕಿ ಜನರ ಮೇಲೆ ಎರಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಗಾಯಗೊಂಡಿದ್ದಾರೆ.ಹಲ್ಲೆಯಿಂದ ಗಾಯಗೊಂಡವರ ತಲೆ, ಕಣ್ಣು ಮತ್ತು ಮುಖ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಕೆಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಗಾಯಾಳುಗಳ ಕೂಗಾಟ ಹಾಗೂ ಚೀರಾಟ ಕೇಳಿ ತಾಂಡಾ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನು ಗದಗ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಹಲ್ಲೆ ನಡೆಸಿದ ಆರೋಪಿ ಹರ್ಜಪ್ಪ ಲಮಾಣಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ವೇಳೆ ಆರೋಪಿಯು ಹಲ್ಲೆ ನಡೆಸಿ ಊರಿನಲ್ಲಿ ಓಡಾಡುತ್ತಿದ್ದ ದೃಶ್ಯಗಳು ಸಮೀಪದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ. ಗ್ರಾಮದಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು, ರಾತ್ರಿ ಸಮಯದಲ್ಲಿ ಸುರಕ್ಷತೆ ಕುರಿತು ಚಿಂತೆಯೂ ವ್ಯಕ್ತವಾಗಿದೆ.ಆಟೋ ಗ್ಯಾಸ್ ಕೊರತೆ, ವದಂತಿಗಳಿಗೆ ಕಿವಿಗೊಡಬೇಡಿ
ಗದಗ: ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ವದಂತಿಯಿಂದ ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ. ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ ಎಂದಿದ್ದಾರೆ.