ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:2013ರಲ್ಲಿ ಕೇದರನಾಥದಲ್ಲಿ ಉಂಟಾದ ಜಲಪ್ರಳಯದಲ್ಲಿ ಮಂದಿರದ ಉಳಿವಿಗೆ ಕಾರಣವಾಗಿದ್ದ ಭೀಮಶಿಲಾ (ಬೃಹತ್ ಬಂಡೆ) ಇಂದಿಗೂ ಪ್ರಖ್ಯಾತಿ ಪಡೆದಿದೆ. ಈ ಭೀಮಶಿಲೆಯಿಂದ ಕೇದರನಾಥನ ಸನ್ನಿದಿ ಹೇಗೆ ರಕ್ಷಣೆಯಾಯಿತು ಎಂಬುದರ ಕುರಿತು ಇಲ್ಲಿನ ಹಿರೇಪೇಟೆ, ಭೂಸಪೇಟೆ, ಕಂಚಗಾರ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶೋತ್ಸವದಲ್ಲಿ ತಿಳಿಸುವ ಕಾರ್ಯ ಕೈಗೊಂಡಿರುವುದು ಸಾರ್ವಜನಿಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಗಣೇಶೋತ್ಸವದಲ್ಲಿ ಪ್ರತಿ ವರ್ಷವೂ ವಿಶೇಷ, ವಿಭಿನ್ನ ಪ್ರಯತ್ನಕ್ಕೆ ಕೈಹಾಕುವ ಇಲ್ಲಿನ ಶ್ರೀ ಗಣೇಶ ಉತ್ಸವ ಮಂಡಳಿಯ ಸದಸ್ಯರು ಈ ಬಾರಿ ಕೇದಾರನಾಥದಲ್ಲಿ ಉಂಟಾದ ಜಲಪ್ರಳಯದಲ್ಲಿ ದೇವಸ್ಥಾನ ಹಾಗೂ ಅಲ್ಲಿ ಆಶ್ರಯ ಪಡೆದಿದ್ದ 500ಕ್ಕೂ ಅಧಿಕ ಜನರ ರಕ್ಷಣೆ ಮಾಡಿದ್ದ ಭೀಮಶಿಲಾ ಹಿನ್ನಲೆ ತಿಳಿಸುವ ಕಾರ್ಯ ಕೈಗೊಂಡಿದೆ.ಇಲ್ಲಿನ ಶ್ರೀ ಗಣೇಶ ಉತ್ಸವ ಮಂಡಳಿಯು 1974ರಿಂದ ಪ್ರತಿವರ್ಷವೂ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜನರ ನೈಜ ಸಮಸ್ಯೆಗಳನ್ನು ಆಧರಿಸಿ ಸನ್ನಿವೇಶಗಳನ್ನು ಸಿದ್ಧಪಡಿಸಿ ಗಣೇಶ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.
ಏನೇನು ವಿಶೇಷ:ಹೈಕೋರ್ಟ್ ಪೀಠ ಸನ್ನಿವೇಶ ಹಾಗೂ ಟ್ರೇನ್ ಓಡಿಸುವ ರೂಪಕ, ಸಮುದ್ರದ ನೀರಿನಲ್ಲಿ ತೇಲುವ ರಾಮಸೇತು ಕಲ್ಲು ತಂದು ಪ್ರದರ್ಶನ, ಕಳಸಾ ಬಂಡೂರಿ ನಾಲಾಗಳು ನದಿಗಳಾಗಿ ಪರಿವರ್ತನೆಗೊಂಡು ಗೋವಾ ರಾಜ್ಯದಲ್ಲಿ ಸಮುದ್ರ ಸೇರುವ ವಿಶೇಷ ಸನ್ನಿವೇಶ, ಅಯೋಧ್ಯಾ ಶ್ರೀರಾಮ ಮಂದಿರ, ಈ ಬಾರಿ ಭೀಮಶಿಲಾದ ಮಹಿಮೆ ಬಿಂಬಿಸುವ ಸನ್ನಿವೇಶ ತಿಳಿಸಲಾಗುತ್ತಿದೆ. ಕಳೆದ ವರ್ಷ ಸುವರ್ಣ ಮಹೋತ್ಸವ ಹಿನ್ನೆಲೆ 11 ದಿನ ಹಾಸ್ಯಸಂಜೆ, ಧಾರ್ಮಿಕ ಸಭೆ, ಬೃಹತ್ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿತ್ತು. ನೂತನ ಸಮಿತಿ ರಚನೆ
ಈ ಬಾರಿ ನೂತನ ಸಮಿತಿ ರಚನೆ ಮಾಡಿದ್ದು, ಅಧ್ಯಕ್ಷರಾಗಿ ಪವನ ತಾವರಗೇರಿ, ಗೌರವ ಕಾರ್ಯದರ್ಶಿಯಾಗಿ ಪವನ ಶಿರೋಳ, ಉಪಾಧ್ಯಕ್ಷರಾಗಿ ಶಶಿಕಾಂತ ಜಿರಂಗಿ, ಸಿದ್ದರಾಮ ಶಿರಗುಪ್ಪಿ, ರಾಹುಲ್ ಗಾರೆ, ಆಷಿಸ್ ಸವಣೂರ, ಪ್ರವೀಣ ಸವಣೂರ, ಸಹ ಗೌರವ ಕಾರ್ಯದರ್ಶಿಗಳಾಗಿ ರಾಜು ಹುನಗುಂದ, ಕೋಶಾಧಿಕಾರಿಯಾಗಿ ಹರ್ಷ ಶಿರೋಳ, ಉಪಕೋಶಾಧಿಕಾರಿಯಾಗಿ ನಾಗಹರಿ ಸವಣೂರ, ಸದಸ್ಯರಾಗಿ ಮಂಜು ಹಾಲಪ್ಪನವರ ಮಹೇಶ ವಿಜಾಪುರ, ಮನೋಜ ಗುತ್ತಲ, ಕೃಷ್ಣಾ ಕಠಾರೆ, ಬಸವರಾಜ ಅಂಗಡಿ ಸೇರಿದಂತೆ 100ಕ್ಕೂ ಅಧಿಕ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ.