ಸಾರಾಂಶ
ಬೆಂಗಳೂರು : ನಮ್ಮ ಮೆಟ್ರೋ 3ನೇ ಹಂತದ ಯೋಜನೆಯನ್ನು ಆದಷ್ಟು ಪ್ರಯಾಣಿಕ ಸ್ನೇಹಿಯಾಗಿ ರೂಪಿಸಲು ನಮ್ಮ ಮೆಟ್ರೋ ಯೋಜಿಸಿದ್ದು, 11 ನಿಲ್ದಾಣಗಳಲ್ಲಿ ಬಹುಮಾದರಿ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸುತ್ತಿದೆ.
ಈ ಹಂತದಲ್ಲಿ ಜೆ.ಪಿ.ನಗರ 4 ಹಂತದಿಂದ ಕೆಂಪಾಪುರದವರೆಗೆ (32 ಕಿಮೀ) ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ (13ಕಿಮೀ) ಸಂಪರ್ಕಿಸುವ 2 ಕಾರಿಡಾರ್‌ಗಳಲ್ಲಿ ಕ್ರಮವಾಗಿ 22 ಮತ್ತು 9 ನಿಲ್ದಾಣಗಳು ನಿರ್ಮಾಣ ಆಗಲಿವೆ. ಇವುಗಳ ಪೈಕಿ 11 ಮೆಟ್ರೋ ನಿಲ್ದಾಣಗಳಲ್ಲಿ ಬಹುಮಾದರಿ ಸಂಪರ್ಕ ವ್ಯವಸ್ಥೆ ಇರಲಿದೆ. ಅಂದರೆ, ಕೊನೆಯ ಮೈಲು ಸಂಪರ್ಕ ಸುಲಭ ಸಾಧ್ಯವಾಗಿಸಲು ನಿಲ್ದಾಣದಲ್ಲಿ ಪ್ರಯಾಣಿಕರು ಹೋಗಿ ಬರಲು ಅನುಕೂಲವಾಗುವಂತೆ ಫೀಡರ್ ಬಸ್ ನಿಲುಗಡೆಗೆ ಝೋನ್ ನಿರ್ಮಿಸಲಾಗುತ್ತಿದೆ. ಅದರ ಜೊತೆಗೆ ರೈಲ್ವೇ ನಿಲ್ದಾಣ ಹಾಗೂ ಭವಿಷ್ಯದ ಉಪನಗರ ರೈಲ್ವೇ ನಿಲ್ದಾಣಕ್ಕೆ ಹೋಗಿಬರಲು ಸುಲಭವಾಗುವಂತೆ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.
8 ಕಡೆ ಪಾದಾಚಾರಿ ಮೇಲ್ಸೇತುವೆ:
ಇದಲ್ಲದೆ, ಹೆಚ್ಚಿನ ಜನದಟ್ಟಣೆಯ ಜಂಕ್ಷನ್, ರಸ್ತೆಗಳಲ್ಲಿ ಪ್ರಯಾಣಿಕರು ಮೆಟ್ರೋ ನಿಲ್ದಾಣದಿಂದ ರಸ್ತೆ ದಾಟಲು ಅನುಕೂಲವಾಗುವಂತೆ 8 ಕಡೆಗಳಲ್ಲಿ ಫೂಟ್ ಓವರ್ ಬ್ರಿಡ್ಜ್ (ಸ್ಕೈವಾಕ್) ನಿರ್ಮಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಜೆ.ಪಿ.ನಗರ ಜಂಕ್ಷನ್, ಕಾಮಾಕ್ಯ ಜಂಕ್ಷನ್, ಮೈಸೂರು ರಸ್ತೆ ನಿಲ್ದಾಣ, ಸುಮನಹಳ್ಳಿ ಜಂಕ್ಷನ್, ಪೀಣ್ಯ ನಿಲ್ದಾಣ, ಬಿಇಎಲ್ ಸರ್ಕಲ್ ನಿಲ್ದಾಣ, ಹೆಬ್ಬಾಳ ರೈಲ್ವೇ ಸ್ಟೇಷನ್, ಹೊಸಹಳ್ಳಿ ನಿಲ್ದಾಣಗಳ ಬಳಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಆಗಲಿದೆ. ಇದರ ಜೊತೆಗೆ ಹಿರಿಯರು, ಅಂಗವಿಕಲರಿಗೆ ಅನುಕೂಲ ಆಗುವಂತೆ ಎಲಿವೇಟರ್, ಎಸ್ಕಲೇಟರ್, ಅದಲ್ಲದೆ ಟ್ರಾವೆಲೆಟರ್‌ನ್ನು ಕೂಡ ಅಳವಡಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತೆ ಹೆಚ್ಚಳ: ಇನ್ನು ಮೆಜಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿದೆ. ಈಗಾಗಲೇ ಮೆಜಸ್ಟಿಕ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಕೆಗೆ ಕ್ರಮ ವಹಿಸಲಾಗಿದೆ. ಅದರ ಜೊತೆಗೆ ದಿನದ ಮೂರು ಪಾಳಿಯಲ್ಲೂ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಪ್ಲಾಟ್‌ಫಾರ್ಮ್‌ಗೆ 2 ಬದಲು 4 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಜೊತೆಗೆ ಜನದಟ್ಟಣೆ ವೇಳೆ ಕಾರ್ಯನಿರ್ವಹಿಸಲು 24 ಹೋಂ ಗಾರ್ಡ್‌ಗಳನ್ನು ನೇಮಿಸಿಕೊಳ್ಳಲಾಗುತ್ತಿದ್ದು, ರೈಲಿಗಾಗಿ ಸರದಿ ನಿಲ್ಲುವುದು, ರೈಲಿನ ಒಳಗಡೆ ಹಿರಿಯರು, ಅಂಗವಿಕಲರಿಗೆ ಕುಳಿತುಕೊಳ್ಳಲು ಇವರು ನೆರವಾಗಲಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದರು.