ಮೆಟ್ರೋ ಹಳದಿ ಮಾರ್ಗದ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಸೇವೆಗೆ ಸಿದ್ಧ

| Published : Jun 14 2024, 01:05 AM IST / Updated: Jun 14 2024, 06:06 AM IST

ಮೆಟ್ರೋ ಹಳದಿ ಮಾರ್ಗದ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಸೇವೆಗೆ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗದಲ್ಲಿ ನಿರ್ಮಿಸಲಾದ ನಗರದ ಪ್ರಥಮ ಡಬ್ಬಲ್‌ ಡೆಕ್ಕರ್ ಫ್ಲೈಓವರ್‌ ಕಾಮಗಾರಿ ಪೂರ್ಣಗೊಂಡಿದೆ.

 ಬೆಂಗಳೂರು :  ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗದಲ್ಲಿ ನಿರ್ಮಿಸಲಾದ ನಗರದ ಪ್ರಥಮ ಡಬ್ಬಲ್‌ ಡೆಕ್ಕರ್ ಫ್ಲೈಓವರ್‌ ಕಾಮಗಾರಿ ಪೂರ್ಣಗೊಂಡಿದೆ. ಅಂತಿಮ ತಪಾಸಣೆ ನಡೆಸಿದ ಬಳಿಕ ಮೆಟ್ರೋ ವಯಡಕ್ಟ್‌ನ ಕೆಳ ಫ್ಲೈಓರ್‌ ಅನ್ನು ಶೀಘ್ರವೇ ವಾಹನಗಳ ಓಡಾಟಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ಒಟ್ಟಾರೆ 18.82 ಕಿ.ಮೀ. ಇರುವ ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ (ಸಿಎಸ್‌ಬಿ) ಡಬ್ಬಲ್‌ ಡೆಕ್ಕರ್ (3.3 ಕಿ.ಮೀ.) ನಿರ್ಮಿಸಲಾಗಿದೆ. ಡಬ್ಬಲ್‌ ಡೆಕ್ಕರ್‌ ಫ್ಲೈಓವರ್‌ನ ಮೇಲ್ಭಾಗದಲ್ಲಿ ನಮ್ಮ ಮೆಟ್ರೋ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ತಪಾಸಣೆ ನಡೆಸಿ ಜೂ.15ರ ನಂತರ ಫ್ಲೈಓವರ್‌ನ ಒಂದು ಬದಿ ಮಾತ್ರ ವಾಹನ ಚಾಲನೆಗೆ ಅನುಮತಿ ನೀಡುವ ಸಾಧ್ಯತೆಯಿದೆ.

ಕಾಮಗಾರಿ ಸಾಕಷ್ಟು ವಿಳಂಬವಾಗಿ ಮುಗಿದಿದೆ. ಇದಕ್ಕೆ ಪೂರಕವಾಗಿ ಸಿಎಸ್‌ಬಿ ಜಂಕ್ಷನ್‌ನಲ್ಲಿ ಬಿಎಂಆರ್‌ಸಿಎಲ್‌ ಐದು ಹತ್ತಿಳಿಯುವ (ಎ, ಬಿ, ಸಿ, ಡಿ, ಇ) ರ್ಯಾಂಪ್‌ಗಳನ್ನು ನಿರ್ಮಿಸುತ್ತಿದೆ. ರಾಗಿಗುಡ್ಡ ಕಡೆಯಿಂದ ಎ, ಬಿ, ಸಿ ರ್ಯಾಂಪ್‌ಗಳು ಕೆ.ಆರ್.ಪುರ, ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತವೆ. ಡಿ ಮತ್ತು ಇ ರ‍್ಯಾಂಪ್‌ಗಳು ಕೆ.ಆರ್.ಪುರ ಕಡೆಯಿಂದ ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡ ಭಾಗಕ್ಕೆ ಸಂಪರ್ಕ ಕಲ್ಪಿಸಲಿವೆ.

ಎ,ಬಿ,ಸಿ ರ್ಯಾಂಪ್‌ಗಳ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿದ್ದು, ಈ ತಿಂಗಳಲ್ಲೇ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿದೆ. ಡಿ ಮತ್ತು ಇ ರ್ಯಾಂಪ್‌ಗಳು ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಕೆಳರಸ್ತೆಯಿಂದ ಡಬ್ಬಲ್‌ ಡೆಕ್ಕರ್‌ನ ಮೊದಲ ಫ್ಲೈಓವರ್‌ 8 ಮೀ. ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್‌ 16 ಮೀ. ಎತ್ತರದಲ್ಲಿದೆ. ಸಂಚಾರ ದಟ್ಟಣೆ ನಿವಾರಣೆ ದೃಷ್ಟಿಯಿಂದ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ ಸಿಗ್ನಲ್‌ ಮುಕ್ತವಾಗಿಸಲಾಗಿದೆ. ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಹೊಸೂರು ಲೇಔಟನ್ನು ಇದರಿಂದ ಅಡ್ಡಿಯಿಲ್ಲದೆ ತಲುಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಸಿಎಸ್‌ಬಿ ಜಂಕ್ಷನ್‌ನಲ್ಲಿ ಕೇವಲ 500 ಮೀ. ಅಂತರದಲ್ಲಿ ಸಿಎಸ್‌ಬಿ-ಕೆ.ಆರ್‌.ಪುರ ಸಂಪರ್ಕಿಸುವ ನೀಲಿ ಮಾರ್ಗ ಹಾಗೂ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದ ಎರಡು ಮೆಟ್ರೋ ನಿಲ್ದಾಣಗಳು ನಿರ್ಮಾಣ ಆಗಲಿವೆ. ಎರಡು ಮೆಟ್ರೋ ನಿಲ್ದಾಣಗಳ ನಡುವೆ ಟ್ರಾವೆಲೆಟರ್‌ ನಿರ್ಮಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ.

ಪ್ರಾಯೋಗಿಕ ಸಂಚಾರ ಪ್ರಾರಂಭ:

ಹಳದಿ ಮಾರ್ಗದಲ್ಲಿ ಸಿಗ್ನಲಿಂಗ್‌ ತಪಾಸಣೆಗಾಗಿ ಗುರುವಾರದಿಂದ ಚಾಲಕರಹಿತ ರೈಲಿನ ಪೂರ್ಣ ಪ್ರಮಾಣದ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ತಾಸಿಗೆ 15-20 ಕಿ.ಮೀ. ವೇಗದಲ್ಲಿ ಚಾಲಕ ಸಹಿತವಾಗಿ ರೈಲು ಸಂಚರಿಸಿತು.

ಕಳೆದ ಫೆಬ್ರವರಿಯಲ್ಲಿ ಚೀನಾದ ಸಿಆರ್‌ಆರ್‌ಸಿ ಕಂಪನಿಯಿಂದ ಬಂದಿರುವ ಚಾಲಕರಹಿತ ರೈಲು ವಿವಿಧ ಬಗೆಯ ಪರೀಕ್ಷೆಗೆ ಒಳಪಡುತ್ತಿದೆ. ಪ್ರಸ್ತುತ ರೈಲಿನ ಸ್ಟ್ಯಾಟಿಕ್‌, ಎಲೆಕ್ಟ್ರಿಕಲ್‌, ಸಿಗ್ನಲಿಂಗ್‌, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು, ಬ್ರೇಕ್‌, ನೂತನ ತಂತ್ರಾಂಶ, ಸಿಸ್ಟಮ್ ಪರೀಕ್ಷೆ ನಡೆಯಲಿವೆ. ಹೊಸ ಮಾದರಿಯ ರೈಲು ಇದಾದ ಕಾರಣ ಒಟ್ಟಾರೆ 37 ಬಗೆಯ ತಪಾಸಣೆ ನಡೆಯಲಿದೆ.

ಸೆಪ್ಟೆಂಬರ್‌ಗೆ ಪ್ರಾಯೋಗಿಕ ಚಾಲನೆ ಮುಗಿಸುವುದು ಹಾಗೂ ವರ್ಷಾಂತ್ಯದ ಒಳಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸುವ ಉದ್ದೇಶದಿಂದ ತಪಾಸಣೆ ಪ್ರಕ್ರಿಯೆ ಚುರುಕುಗೊಂಡಿದೆ. ಬಳಿಕ ರಿಸರ್ಚ್ ಡಿಸೈನ್ಸ್ ಆ್ಯಂಡ್‌ ಸ್ಟ್ಯಾಂಡರ್ಡ್ ಆರ್ಗನೈಸೇಶನ್ (ಆರ್‌ಡಿಎಸ್ಒ), ಕಮಿಷನರ್ ಆಫ್ ಮೆಟ್ರೋ ರೈಲ್ ಸೇಫ್ಟಿಯಿಂದ (ಸಿಎಂಆರ್‌ಎಸ್) ಪರಿಶೀಲನೆ ನಡೆಯಲಿದೆ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ತಿಳಿಸಿದರು.