ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬೈಕ್‌ಗೆ ಗ್ರಾಮಸ್ಥರಿಂದ ಬೆಂಕಿ

| Published : Mar 01 2025, 01:01 AM IST

ಸಾರಾಂಶ

ಟ್ರ್ಯಾಕ್ಟರ್ ಸಾಲದ ಕಂತು ವಸೂಲಿಗೆ ಬಂದ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಯು ರೈತ ಕುಟುಂಬಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕನ ಮೇಲೆ ಹಲ್ಲೆ ನಡೆಸಿದ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು, ಖಾಸಗಿ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಗೆಜ್ಜೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮದ ಲಕ್ಷ್ಮಣ ಎಂಬುವರ ಪುತ್ರ ಸುನಿಲ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶ್ರೀರಾಮ್ ಫೈನಾನ್ಸ್‌ನಲ್ಲಿ ೨.೫ ಲಕ್ಷ ರು. ಟ್ರ್ಯಾಕ್ಟರ್ ಸಾಲ ಪಡೆದಿದ್ದ ಗ್ರಾಮದ ರೈತ ಲಕ್ಷ್ಮಣ ಕಳೆದ ನಾಲ್ಕು ತಿಂಗಳಿಂದ ಸಾಲದ ಕಂತು ಪಾವತಿಸಿರಲಿಲ್ಲ. ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ಫೈನಾನ್ಸ್ ಸಂಸ್ಥೆಯ ಇಬ್ಬರು ಸಿಬ್ಬಂದಿ ಬಾಕಿ ಉಳಿಸಿಕೊಂಡಿರುವ ಸಾಲದ ಕಂತು ಪಾವತಿಸಿ ಇಲ್ಲದಿದ್ದರೆ ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ಒತ್ತಡ ಹಾಕಿದ್ದಾರೆ. ಈ ವೇಳೆ ಲಕ್ಷ್ಮಣ ಅವರ ಪುತ್ರ ಸುನಿಲ್ ಈಗ ಕಟ್ಟಲು ಹಣವಿಲ್ಲ, ಚಿನ್ನದ ಒಡವೆ ಅಡಮಾನವಿಟ್ಟು ನಾಳೆ ಪಾವತಿಸುವುದಾಗಿ ಪರಿಪರಿಯಾಗಿ ಕೇಳಿಕೊಂಡರೂ ಸಹ ಇದಕ್ಕೆ ಒಪ್ಪದ ಸಿಬ್ಬಂದಿ ಕುಟುಂಬಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುನಿಲ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಫೈನಾನ್ಸ್ ಸಿಬ್ಬಂದಿ ತಂದಿದ್ದ ಬೈಕ್‌ಗೆ ಬೆಂಕಿ ಹಚ್ಚುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತ ಸಿಬ್ಬಂದಿ ಕೊನೆಗೆ ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.