ಸಾರಾಂಶ
ಬೆಂಗಳೂರು : ಮೈಕ್ರೋಸಾಫ್ಟ್ ಸಾಫ್ಟ್‌ವೇರ್ ಕೈಕೊಟ್ಟ ಹಿನ್ನೆಲೆಯಲ್ಲಿ ದೇಶದ ಮೂರನೇ ಅತಿ ದಟ್ಟಣೆಯ ಬೆಂಗಳೂರು (ಕೆಐಎ) ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆವರೆಗೆ ಶೇಕಡ 90ರಷ್ಟು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಮತ್ತು ಹಲವು ವಿಮಾನಗಳ ಹಾರಾಟ ರದ್ದುಗೊಂಡು ಪ್ರಯಾಣಿಕರು ಪರದಾಡಿದರು.
ಐದು ತಾಸಿಗೂ ಹೆಚ್ಚು ಕಾಲ ವಿಮಾನಗಳ ನಿರ್ಗಮನ ವಿಳಂಬವಾಗಿತ್ತು. ಪ್ರಯಾಣಿಕರ ಉದ್ದನೇಯ ಸಾಲುಗಳು, ಸಿಬ್ಬಂದಿ ಮತ್ತು ಪ್ರಯಾಣಿಕರಲ್ಲಿ ಗೊಂದಲ, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾಫ್ಟ್‌ವೇರ್ ಕೈಕೊಟ್ಟ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನಾನುಕೂಲ ತಪ್ಪಿಸಲು ಟಿಕೆಟ್ ಮೇಲೆ ಪ್ರಯಾಣಿಕರ ವಿವರಗಳನ್ನು ಕೈಯಿಂದ ಬರೆದುಕೊಡುವ ಮೂಲಕ ಚೆಕ್ ಇನ್ ಸಮಸ್ಯೆಯನ್ನು ಕಡಿಮೆ ಮಾಡಲು ಏರ್‌ಲೈನ್ಸ್ ಸಿಬ್ಬಂದಿ ಪ್ರಯತ್ನಿಸಿದರು. ಆದರೂ, ಸಂಜೆಯವರೆಗೂ ಗೊಂದಲದ ವಾತಾವರಣ ಮುಂದುವರೆದಿತ್ತು.
ಬೆಳಗ್ಗೆ 10.40ಕ್ಕೆ ಸಾಫ್ಟ್‌ವೇರ್ ಸಮಸ್ಯೆ ಎದುರಾಗಿದ್ದು, ಸಂಜೆ 4 ಗಂಟೆವರೆಗೂ ಸಾಮಾನ್ಯ ಸ್ಥಿತಿಗೆ ಬಂದಿರಲಿಲ್ಲ. ‘ಏರ್‌ಲೈನ್ಸ್ ಕಂಪನಿಗಳೊಂದಿಗೆ ಪ್ರಯಾಣಿಕರು ಮಾತನಾಡುವ ಮೂಲಕ ವಿಮಾನಗಳ ನಿರ್ಗಮನ ಮತ್ತು ಆಗಮನದ ಮಾಹಿತಿಯನ್ನು ಪಡೆದುಕೊಳ್ಳಬೇಕು’ ಎಂದು ಕೆಐಎ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.
‘ಯಾವುದೇ ಸಮಸ್ಯೆ ಎದುರಾದರೂ ಜನ ಜೀವನ ಮುಂದುವರೆಯಬೇಕು. ಸಾಫ್ಟ್‌ವೇರ್ ಕೈಕೊಟ್ಟರೂ ಕೈನಲ್ಲಿ ಚೆಕ್ ಇನ್ ಮಾಹಿತಿ ಬರೆದುಕೊಡುವ ಮೂಲಕ ಇಂಡಿಗೋ ಸಿಬ್ಬಂದಿ ಪ್ರಯಾಣಿಕರ ಅನಾನುಕೂಲ ತಪ್ಪಿಸಲು ಪ್ರಯತ್ನಿಸಿದ್ದಾರೆ’ ಎಂದು ಸಾರಾ ಅಹ್ಮದ್ ಎಂಬುವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ, ವಿಮಾನಗಳ ನಿರ್ಗಮನ ವಿಳಂಬ, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪ್ರಯಾಣಿಕರು ಜಾಲತಾಣಗಳಲ್ಲಿ ಫೋಸ್ಟ್ ಮಾಡಿ ಅನುಭವ ಹಂಚಿಕೊಂಡರು.