ಬೆಳೆಗೆ ಮಿಕ, ಮುಳ್ಳು ಹಂದಿಗಳ ಕಾಟ

| Published : Aug 09 2024, 12:53 AM IST

ಸಾರಾಂಶ

ಪ್ರಸಕ್ತ ವರ್ಷ ಸ್ವಲ್ಪ ತಡವಾಗಿದ್ದರೂ ಗುರಿಗಿಂತ ಹೆಚ್ಚು ಹೆಸರು ಮತ್ತು ಮೆಕ್ಕೆಜೋಳ ಬಿತ್ತನೆಯಾಗಿದೆ. ತಾಲೂಕಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಅಲ್ಲಲ್ಲಿ ಕಬ್ಬು ಕೂಡ ಬೆಳೆಯಲಾಗಿದೆ

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ತಾಲೂಕಿನ ವಿವಿಧೆಡೆ ಮಕ್ಕೆಜೋಳಕ್ಕೆ ಮಿಕ, ಹಂದಿಗಳ ಕಾಟ ವಿಪರೀತವಾಗಿದೆ. ಬೆಳೆ ರಕ್ಷಣೆ ರೈತರಿಗೆ ಸವಾಲಾಗಿ ಪರಿಣಮಿಸಿದೆ.

ನಾಲ್ಕೈದು ಸಾವಿರ ಖರ್ಚು ಮಾಡಿ ಹೊಲದ ಸುತ್ತಲೂ ಬೆಳೆ ರಕ್ಷಣೆಗೆ ತಂತಿ ಬೇಲಿ ಅಳವಡಿಸಿದ್ದರೂ ಬೆದರದೆ ರಾತ್ರೋರಾತ್ರಿ ಹೊಲಕ್ಕೆ ನುಗ್ಗಿ ಹಾನಿ ಮಾಡುತ್ತಿವೆ.

ಪ್ರಸಕ್ತ ವರ್ಷ ಸ್ವಲ್ಪ ತಡವಾಗಿದ್ದರೂ ಗುರಿಗಿಂತ ಹೆಚ್ಚು ಹೆಸರು ಮತ್ತು ಮೆಕ್ಕೆಜೋಳ ಬಿತ್ತನೆಯಾಗಿದೆ. ತಾಲೂಕಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಅಲ್ಲಲ್ಲಿ ಕಬ್ಬು ಕೂಡ ಬೆಳೆಯಲಾಗಿದೆ.

ತಾಲೂಕಿನ ಮಜ್ಜೂರ ಗ್ರಾಮದ ಬಸಪ್ಪ ಹನುಮಂತಪ್ಪ ಮುಂಡವಾಡ, ಪ್ರಕಾಶ ಮಾಂಡ್ರೆ, ಗುಡದಪ್ಪ ಹಡಗಲಿ, ತಿಪ್ಪಣ್ಣ ಮುಂಡವಾಡ ಸೇರಿದಂತೆ ನೂರಾರು ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಗ್ರಾಮದ ಸುತ್ತಲೂ ಗುಡ್ಡಗಾಡು ಪ್ರದೇಶ ಇರುವುದರಿಂದ ಮಿಕಗಳ ಕಾಟ ವಿಪರೀತವಾಗಿದೆ. ನಿತ್ಯ ರಾತ್ರಿ ನಿದ್ದೆಗೆಟ್ಟು ಬೆಳೆ ರಕ್ಷಣೆಗೆ ಹೋಗುತ್ತಿದ್ದು, ಸಮಯ ತಪ್ಪಿಸಿ ಮಿಕಗಳು ಬಂದು ಹೊಲಕ್ಕೆ ನುಗ್ಗಿ ಹಾಳು ಮಾಡುತ್ತಿವೆ ಎನ್ನುತ್ತಾರೆ ರೈತರು.

ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ, ಆರಿದ್ರ, ಪುನರ್ವಸು, ಪುಷ್ಯ ಮಳೆಗಳು ನಿರಂತರವಾಗಿ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿರುವುದು ಒಂದು ಕಡೆಯಾದರೆ, ಸದ್ಯ ಹೆಸರು ಬೆಳೆ ಕಟಾವಿಗೆ ಬಂದಿದ್ದು, ವಕ್ಕಲಿ ಮಾಡಿಕೊಳ್ಳಲು ಮಳೆ ಬಿಡುತ್ತಿಲ್ಲ ಎಂದು ರೈತರು ಚಿಂತಿಸುತ್ತಿದ್ದಾರೆ.

೩೦ಕ್ಕೂ ಹೆಚ್ಚು ಮಿಕಗಳ ಹಿಂಡುಗಳಿದ್ದು, ರೈತರ ಬೆಳೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ರೈತರು ಎಷ್ಟೇ ಕಾವಲು ಕಾಯ್ದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೊಲದ ತುಂಬೆಲ್ಲ ಕೋಲುಗಳನ್ನು ಹುಗಿದು, ಪ್ಲಾಸ್ಟಿಕ್ ಹಾಳೆಗಳನ್ನು ಕಟ್ಟಿ, ಜಮೀನು ಸುತ್ತಲೂ ತಂತಿ ಬೇಲಿ ಹಾಕಿ ಬೆಳೆ ರಕ್ಷಣೆಗೆ ಮುಂದಾದರೂ ಪ್ರಯೋಜನವಾಗುತ್ತಿಲ್ಲ ಎಂದು ಮೆಕ್ಕೆಜೋಳ ಬೆಳೆದ ಬಸಪ್ಪ ಹನಮಂತಪ್ಪ ಮುಂಡವಾಡ ಹೇಳುತ್ತಾರೆ.

ಕೆಲ ರೈತರು ಹೊಲಗಳಲ್ಲಿ ದೀಪ ಉರಿಸುತ್ತಿದ್ದಾರೆ. ನಾಯಿಗಳನ್ನು ಹೊಲದಲ್ಲಿ ಬಿಡುತ್ತಿದ್ದಾರೆ. ಸಿಡಿಮದ್ದು ಹಾರಿಸುತ್ತಿದ್ದಾರೆ, ಹೀಗೆ ಮಿಕಗಳ ಕಾಟದಿಂದ ಪಾರಾಗಲು ನಾನಾ ಪ್ರಯೋಗ ಮಾಡುತ್ತಿದ್ದಾರೆ. ಏನೇ ಶ್ರಮಪಟ್ಟರೂ ರೈತರ ಫಸಲಿಗೆ ಮಿಕಗಳು ಮುತ್ತಿಗೆ ಹಾಕುವುದು ಮಾತ್ರ ನಿಲ್ಲುತ್ತಿಲ್ಲ.

ಇದು ಗುಡ್ಡದ ವ್ಯಾಪ್ತಿಗಳಲ್ಲಿ ಬರುವ ರೈತರ ಜಮೀನುಗಳ ಗೋಳಾದರೆ ಇನ್ನು ಕೊಂಚಿಗೇರಿ, ಬಿಜ್ಜೂರ, ನಾಗರಮಡುವು ಮುಂತಾದೆಡೆ ಹೆಸರು, ಅಲಸಂದಿ, ಕಂಠಿ ಶೇಂಗಾ ಮತ್ತಿತರ ಬೆಳೆ ಬೆಳೆದಿದ್ದು, ಈ ಭಾಗದಲ್ಲಿ ಜಿಂಕೆಗಳ ಕಾಟ ಹೆಚ್ಚಾಗಿದೆ. ಹೆಸರು ಬೆಳೆಗೆ ಸದ್ಯ ಮಂಗಗಳ ಕಾಟವೂ ವಿಪರೀತವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ತಾಲೂಕಿನ ಗುಡ್ಡದ ವ್ಯಾಪ್ತಿಗಳಲ್ಲಿ ಬರುವ ಜಮೀನುಗಳ ರೈತರ ಹೊಲಗಳಿಗೆ ಮಿಕಗಳ ಹಿಂಡು ಲಗ್ಗೆ ಇಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ರೈತರು ಬೆಳೆ ಹಾನಿಯಾದ ಬಗ್ಗೆ ಫೋಟೋ, ಆಧಾರ್‌ ಕಾರ್ಡ್‌ನೊಂದಿಗೆ ಅರಣ್ಯ ಇಲಾಖೆಗೆ ಬಂದು ಅರ್ಜಿ ಸಲ್ಲಿಸಿದರೆ ನಮ್ಮ ಇಲಾಖೆ ಸಿಬ್ಬಂದಿ ರೈತರ ಜಮೀನುಗಳಿಗೆ ಭೇಟಿ ನೀಡಿ ಜಿಪಿಎಸ್ ಮಾಡಿಕೊಂಡು ರೈತರಿಗೆ ಪರಿಹಾರ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ವಲಯ ಅರಣ್ಯ ಇಲಾಖೆ ಅಧಿಕಾರಿ ರಾಮಪ್ಪ ಪೂಜಾರ ತಿಳಿಸಿದ್ದಾರೆ.