ಸಾರಾಂಶ
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ‘ರೈತ ಶಕ್ತಿ’ ಕಟ್ಟಡ ಉದ್ಘಾಟನಾ ಸಮಾರಂಭ.
ಕನ್ನಡಪ್ರಭ ವಾರ್ತೆ ಪುತ್ತೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಯಲ್ಲಿ ಕೋವಿಡ್ ಬಳಿಕ ಹಾಲಿನ ಇಳುವರಿ ತುಂಬಾ ಕಡಿಮೆಯಾಗಿದೆ. ಸುಮಾರು ೫ಲಕ್ಷ ಲೀಟರ್ ಆಸುಪಾಸಿನಲ್ಲಿದ್ದ ಹಾಲಿನ ಇಳುವರಿ ಇದೀಗ ೩.೬೦ ಲಕ್ಷ ಲೀಟರ್‌ಗೆ ಇಳಿದಿದೆ. ಆದರೆ ಸುಮಾರು ೫ ಲಕ್ಷ ಲೀಟರ್‌ನಷ್ಟು ಹಾಲಿನ ಬೇಡಿಕೆಯಿದೆ. ಹೊರ ಜಿಲ್ಲೆಯ ಒಕ್ಕೂಟಗಳಿಂದ ಖರೀದಿಸಲಾಗುತ್ತಿದ್ದು, ಒಕ್ಕೂಟಕ್ಕೆ ಮತ್ತು ಹಾಲು ಉತ್ಪಾದಕರಿಗೂ ನಷ್ಟ ಆಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲೇ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಹೇಳಿದರು.ಅವರು ಆರ್ಯಾಪು ಗ್ರಾಮದ ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ‘ರೈತ ಶಕ್ತಿ’ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಚಂದ್ರ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಗೋದಾಮು ಉದ್ಘಾಟಿಸಿದರು. ದ.ಕ.ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ರಾಮಕೃಷ್ಣ ಭಟ್, ದ.ಕ. ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಡಿ.ಆರ್ ಸತೀಶ್ ರಾವ್, ಊರಿನ ಗಣ್ಯರಾದ ಎಂ.ಬಿ. ವಿಶ್ವನಾಥ ರೈ, ವಿಶ್ವೇಶ್ವರ ಭಟ್ ಬಂಗಾರಡ್ಕ, ಸಂಘದ ಉಪಾಧ್ಯಕ್ಷ ಗಂಗಾಧರ ರೈ ಮತ್ತಿತರರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಎನ್. ಗೋಪಾಲ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಸಂಧ್ಯಾ ವರದಿ ವಾಚಿಸಿದರು. ನಿದೇರ್ಶಕ ಚಿದಾನಂದ ಸುವರ್ಣ ವಂದಿಸಿದರು. ಮೋಹನ್ ಕಾರ್ಯಕ್ರಮ ನಿರೂಪಿಸಿದರು.