ತುರುವೇಕೆರೆಯಲ್ಲಿ ಕಾಮಗಾರಿ ಮಾಡದೆ ಲಕ್ಷಾಂತರ ರು. ವಂಚನೆ ಆರೋಪ

| Published : Dec 21 2024, 01:16 AM IST

ತುರುವೇಕೆರೆಯಲ್ಲಿ ಕಾಮಗಾರಿ ಮಾಡದೆ ಲಕ್ಷಾಂತರ ರು. ವಂಚನೆ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸೊರವನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರುವ ಹೊಣಕೆರೆಯಲ್ಲಿ ಸಿಮೆಂಟ್ ರಸ್ತೆ, ಚರಂಡಿ, ಮನೆ ನಿರ್ಮಾಣ, ಶೌಚಗೃಹ ನಿರ್ಮಾಣ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಿ ಲಕ್ಷಾಂತರ ರುಪಾಯಿಯನ್ನು ವಂಚಿಸಲಾಗಿದೆ ಎಂದು ಗ್ರಾಮದ ಮುಖಂಡರಾದ ವೇಣುಗೋಪಾಲ್, ಇತರರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸೊರವನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರುವ ಹೊಣಕೆರೆಯಲ್ಲಿ ಸಿಮೆಂಟ್ ರಸ್ತೆ, ಚರಂಡಿ, ಮನೆ ನಿರ್ಮಾಣ, ಶೌಚಗೃಹ ನಿರ್ಮಾಣ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಿ ಲಕ್ಷಾಂತರ ರುಪಾಯಿಯನ್ನು ವಂಚಿಸಲಾಗಿದೆ ಎಂದು ಗ್ರಾಮದ ಮುಖಂಡರಾದ ವೇಣುಗೋಪಾಲ್, ಕುಮಾರ್ ಮತ್ತು ರಾಮು ಸೇರಿದಂತೆ ಹಲವರು ಆರೋಪಿಸಿದ್ದಾರೆ.

ಗ್ರಾಮದ ಬೂಡ್ಸ್ ರಂಗಪ್ಪನವರ ಮನೆಯಿಂದ ಬೂವನಹಳ್ಳಿ ಗಂಗಣ್ಣನವರ ಮನೆಯತನಕ ಸಿಮೆಂಟ್ ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ದಾಖಲಾತಿಗಳಲ್ಲಿ ತೋರಿಸಲಾಗಿದೆ. ಆದರೆ ಕಾಮಗಾರಿ ಅಪೂರ್ಣ ಹಾಗೂ ಮಾಡಲಾಗಿರುವ ಕಾಮಗಾರಿಯೂ ಕಳಪೆಯಿಂದ ಕೂಡಿದೆ. ಗ್ರಾಮದ ಯೋಗೀಶಣ್ಣನ ಮನೆಯಿಂದ ರಂಗಧಾಮಣ್ಣನ ಮನೆಯ ತನಕ ಸುಮಾರು ೨೦೦ ಮೀಟರ್ ನಷ್ಟು ಸಿಸಿ ಚರಂಡಿ ಮಾಡಲಾಗಿದೆ ಎಂದು ದಾಖಲೆಗಳನ್ನು ಸೃಷ್ಠಿಸಲಾಗಿದೆ. ಆದರೆ ಕಾಮಗಾರಿಯನ್ನೇ ಮಾಡದೇ ಸುಮಾರು ೫.೪೦ ಲಕ್ಷ ರು.ಗಳನ್ನು ನರೇಗಾ ಯೋಜನೆಯಡಿ ಪಂಚಾಯಿತಿಯಿಂದ ಡ್ರಾ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮದವರಿಗೆ ಸ್ಥಳ ವೀಕ್ಷಣೆ ಮಾಡಿಸಿ ದೂರಿದರು.ಸತ್ತು ಹೆಸರಲ್ಲಿ ಹಣ ಡ್ರಾ: ಗ್ರಾಮದ ದೊಡ್ಡಮ್ಮ ರಂಗಯ್ಯ ಎಂಬುವವರ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಮಾರು ೨೭ ಸಾವಿರ ರು.ಗಳನ್ನು ಕಳೆದ ಮೂರ್‍ನಾಲ್ಕು ತಿಂಗಳ ಹಿಂದೆ ಡ್ರಾ ಮಾಡಲಾಗಿದೆ. ಆದರೆ ದೊಡ್ಡಮ್ಮನವರು ನಿಧನರಾಗಿ ಸುಮಾರು ಎರಡು ವರ್ಷವಾಗಿದೆ. ಗ್ರಾಮದಲ್ಲಿ ಹಲವಾರು ಮಂದಿ ಗ್ರಾಮ ಪಂಚಾಯಿತಿಯಿಂದ ಹಣ ಬರುತ್ತದೆ ಎಂಬ ಉದ್ದೇಶದಿಂದ ಸಾಲ ಮಾಡಿ ಶೌಚಗೃಹ, ಹುದಿಬದು, ದನದ ಕೊಟ್ಟಿಗೆ ನಿರ್ಮಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಫಲಾನುಭವಿಗಳ ಹೆಸರಿಗೆ ಹಣ ಬಿಡುಗಡೆ ಮಾಡಿಲ್ಲ. ಆದರೆ ಅವರ ಹೆಸರಿನಲ್ಲಿ ಇತರೆ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ ಆರೋಪಿಸಿದರು. ನಕಲಿ ಜಾಬ್‌ ಕಾರ್ಡ್‌: ಗ್ರಾಮದಲ್ಲಿ ನಡೆದಿದೆ ಎಂದು ಬಿಂಬಿಸಿರುವ ಕಾಮಗಾರಿಗಳಿಗೆ ನಕಲಿ ಜಾಬ್ ಕಾರ್ಡ್‌ಗಳನ್ನು ಸೃಷ್ಠಿಸಲಾಗಿದೆ. ಬೆಂಗಳೂರಿನ ನಿವಾಸಿಗಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಸರ್ಕಾರಿ ನೌಕರರ ಕುಟುಂಬದ ಸದಸ್ಯರಿಗೆ, ಗುತ್ತಿಗೆದಾರರ ಕುಟುಂಬದ ಹೆಸರಿಗೆ, ಗ್ರಾಮ ಪಂಚಾಯಿತಿಯ ಸಿಬ್ಬಂದಿಯ ಕುಟುಂಬದ ಸದಸ್ಯರ ಹೆಸರಿಗೆ ಕಾಮಗಾರಿಗಳ ಬಿಲ್ ಪಾವತಿ ಮಾಡಲಾಗಿದೆ ಎಂದು ದೂರಿದರು. ಕರಾಮತ್ತು: ಸೊರವನಹಳ್ಳಿ ಗ್ರಾಮಪಂಚಾಯಿಯಿಯ ಕಂಪ್ಯೂಟರ್ ಆಪರೇಟರ್ ರವರು ನಕಲಿ ಜಾಬ್ ಕಾರ್ಡ್‌ಗಳನ್ನು ಸೃಷ್ಠಿಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರಿಗೆ ಬೇಕಾದವರಿಗೆ ಹಣ ವರ್ಗಾವಣೆ ಮಾಡಿಸಿ ಅವರಿಂದ ಪುನಃ ಹಣವನ್ನು ಹಿಂಪಡೆಯಲಾಗುತ್ತಿದೆ. ಕೂಡಲೇ ಕಂಪ್ಯೂಟರ್ ಆಪರೇಟರ್ ರವರನ್ನು ಕರ್ತವ್ಯದಿಂದ ಪದಚ್ಯುತಿಗೊಳಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

ತಾಪಂ ಇಒ ಮೌನ: ತಮ್ಮ ಗ್ರಾಮ ಹಾಗೂ ಇನ್ನಿತರ ಗ್ರಾಮಗಳಲ್ಲಿ ಆಗಿರುವ ಕಾಮಗಾರಿಗಳು ಮತ್ತು ಅದಕ್ಕೆ ತಗುಲಿರುವ ಖರ್ಚು ಸೇರಿದಂತೆ ಇನ್ನಿತರ ಮಾಹಿತಿಯನ್ನು ನೀಡಿ ಎಂದು ಸಾಕಷ್ಟು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ದಾಖಲೆಗಳನ್ನು ನೀಡುತ್ತಿಲ್ಲ. ಈ ಕುರಿತು ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ವಿಷಾದಿಸಿದರು.ಜಾಣಕುರುಡು: ತಮ್ಮ ಗ್ರಾಮದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದರೂ ಸಹ ಯಾವುದೇ ಕ್ರಮಕ್ಕೆ ಮುಂದಾಗದ ಗ್ರಾಮ ಪಂಚಾಯ್ತಿಯ ಸದಸ್ಯರಾದ ಎಚ್.ಎಂ.ಸಂದೇಶ್ ಮತ್ತು ಗೀತಾ ಅರುಣ್ ಕುಮಾರ್ ರವರ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕೂಡಲೇ ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.