ಸಾರಾಂಶ
ಗೂಗಲ್ ಪೇ ಮೂಲಕ ಲಕ್ಷಾಂತರ ರು. ವಂಚಿಸಿದ ಘಟನೆ ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ: ಹೋಂ ನರ್ಸ್ ಕೆಲಸಕ್ಕೆಂದು ಬಂದಾತ ಗೂಗಲ್ ಪೇ ಮೂಲಕ ಲಕ್ಷಾಂತರ ರು. ವಂಚಿಸಿದ ಘಟನೆ ಕಸಬಾ ಗ್ರಾಮದಲ್ಲಿ ಸಂಭವಿಸಿದೆ.
ಕಸಬಾ ಗ್ರಾಮದ ಶಶಿಧರ (75) ಅವರ ಮನೆಗೆ ನ.3ರಂದು ರತ್ನಾಕರ ಎಂಬವರ ಅಲೈಟ್‌ಕೇರ್ ಎಂಬ ಸಂಸ್ಥೆಯಿಂದ ಕಾರ್ತಿಕ ಎಂಬಾತ ಹೋಂ ನರ್ಸ್ ಕೆಲಸಕ್ಕೆ ಬಂದಿದ್ದಾರೆ. ಇವರಿಬ್ಬರು ಶಶಿಧರ ಅವರಿಗೆ ಮೋಸ ಮಾಡುವ ಉದ್ದೇಶದಿಂದ ನ. 9ರಂದು ಸಂಜೆ 5.30 ಗಂಟೆಗೆ ಆರೋಪಿ ರತ್ನಾಕರ, ಕಾರ್ತಿಕ್‌ನ ಖಾತೆಗೆ ಗೂಗಲ್ ಪೇ ಮಾಡುವಂತೆ ಶಶಿಧರ ಅವರಿಗೆ 10 ಸಾವಿರ ರು. ಹಣ ನೀಡಿ ಒತ್ತಾಯ ಪೂರ್ವಕವಾಗಿ ಗೂಗಲ್ ಪೇ ಮಾಡಿಸಿದ್ದಾರೆ. ಈ ಸಂದರ್ಭ ಗೂಗಲ್ ಪೇ ಪಿನ್ ನಂಬ್ರ ನೋಡಿದ್ದ ಆರೋಪಿ ಕಾರ್ತಿಕ್ ನ. 10ರಿಂದ ಡಿ. 8ರ ವರೆಗೆ ಶಶಿಧರ ಅವರ ಯುನಿಯನ್ ಬ್ಯಾಂಕ್ ಕಾರ್ಕಳ ಶಾಖೆಯ ಖಾತೆಯಿಂದ ಗೂಗಲ್ ಪೇ ಮುಖಾಂತರ 9,80,000 ರು. ಹಣವನ್ನು ತನ್ನ ಭಾರತ್ ಬ್ಯಾಂಕ್ ಕೋ-ಅಪರೇಟಿವ್ ಸೊಸೈಟಿ ಖಾತೆಗೆ ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.