ಚಿರತೆ ಶೋಧ ಕಾರ್ಯ ತೀವ್ರಗೊಳಿಸಲು ಖನಿಜ ನಿಗಮದ ಅಧ್ಯಕ್ಷ ಜಿ.ಎಸ್‌. ಪಾಟೀಲ ಆದೇಶ

| Published : Feb 11 2024, 01:46 AM IST

ಚಿರತೆ ಶೋಧ ಕಾರ್ಯ ತೀವ್ರಗೊಳಿಸಲು ಖನಿಜ ನಿಗಮದ ಅಧ್ಯಕ್ಷ ಜಿ.ಎಸ್‌. ಪಾಟೀಲ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಚಿರತೆ ಶೋಧ ಕಾರ್ಯವನ್ನು ತೀವ್ರಗೊಳಿಸಲು ಆದೇಶಿಸುವುದರ ಜತೆಗೆ ಜೀಗೇರಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ರಾತ್ರಿಯಿಡಿ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂಗೆ ಸೂಚಿಸಲಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.

ಗಜೇಂದ್ರಗಡ: ಚಿರತೆ ಶೋಧ ಕಾರ್ಯವನ್ನು ತೀವ್ರಗೊಳಿಸಲು ಆದೇಶಿಸುವುದರ ಜತೆಗೆ ಜೀಗೇರಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ರಾತ್ರಿಯಿಡಿ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂಗೆ ಸೂಚಿಸಲಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.

ಸಮೀಪದ ಜೀಗೇರಿ ಗ್ರಾಮದಲ್ಲಿ ಚಿರತೆ ದಾಳಿಗೆ ಒಳಗಾದ ಗಾಯಳುಗಳ ನಿವಾಸಕ್ಕೆ ಶನಿವಾರ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದರು.

ಕಳೆದ ಕೆಲ ದಿನಗಳ ಹಿಂದೆ ಚಿರತೆ ದಾಳಿಯಿಂದ ೩ ಯುವಕರು ಗಾಯಗೊಂಡಿದ್ದ ವಿಷಯ ತಿಳಿದ ತಕ್ಷಣವೇ ಅರಣ್ಯ ಇಲಾಖೆಗೆ ಚಿರತೆ ಸೆರೆಹಿಡಿಯಲು ಆದೇಶಿಸುವುದರೊಂದಿಗೆ ತಾಲೂಕಾಡಳಿತದಿಂದ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದೇನು. ಹೀಗಾಗಿ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಲು ತಹಸೀಲ್ದಾರ್ ಅವರಿಗೆ ತಿಳಿಸಿ ಸ್ಥಳಕ್ಕೆ ಕಳುಹಿಸಿ ಘಟನೆಯ ಕ್ಷಣ, ಕ್ಷಣದ ಮಾಹಿತಿಯನ್ನು ಪಡೆದುಕೊಂಡಿದ್ದೇನು. ಇತ್ತ ಆಧುನಿಕ ತಂತ್ರಜ್ಞಾನ ಹಾಗೂ ಹೆಚ್ಚಿನ ಸಿಬ್ಬಂದಿಯೊಂದಿಗೆ ಚಿರತೆ ಶೋಧ ಕಾರ್ಯವನ್ನು ನಡೆಸುವಂತೆ ಜಿಲ್ಲಾ ವಲಯ ಅರಣ್ಯಧಿಕಾರಿಗಳಿಗೆ ಸೂಚಿಸಿ, ಜಿಲ್ಲಾಧಿಕಾರಿಗಳಿಗೆ ಘಟನೆ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಪ್ರತಿಕ್ಷಣದ ಮಾಹಿತಿಯನ್ನು ಪಡೆದುಕೊಳ್ಳಲು ತಿಳಿಸಲಾಗಿತ್ತು ಎಂದರು.

ಅರಣ್ಯ ಇಲಾಖೆಯಿಂದ ಚಿರತೆ ಶೋಧ ಕಾರ್ಯಾಚರಣೆ ವೇಳೆ ಬಾಳೆತೋಟ ಸೇರಿ ಇತರ ಕೃಷಿ ಜಮೀನಿನಲ್ಲಿ ವಾಹನಗಳ ಓಡಾಟದಿಂದ ಬೆಳೆ ನಾಶವಾಗಿದ್ದು, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಜಮೀನು ಮತ್ತು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಧನಕ್ಕೆ ಕಡತಗಳನ್ನು ಸಲ್ಲಿಸಲು ಸೂಚಿಸಲಾಗಿದ್ದು ಸೂಕ್ತ ಪರಿಹಾರವನ್ನು ಒದಗಿಸಲಾಗುವುದು. ಇತ್ತ ಚಿರತೆ ದಾಳಿಗೆ ತುತ್ತಾಗಿರುವ ಯುವಕರಿಗೆ ಇಂದು ಸಾಂತ್ವನ ನೀಡಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾಳೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಇನ್ನೊರ್ವ ಗಾಯಾಳು ಆರೋಗ್ಯವನ್ನು ವಿಚಾರಿಸುತ್ತೇನೆ ಎಂದ ಅವರು, ಜೀಗೇರಿ, ನಾಗೇಂದ್ರಗಡ ಗ್ರಾಮ ಸೇರಿ ಸುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಚಿರತೆ ಓಡಾಟದ ಬಗ್ಗೆ ಪ್ರಾಥಮಿಕ ಮಾಹಿತಿಯಿದೆ. ಹೀಗಾಗಿ ಗ್ರಾಮಸ್ಥರು ಮತ್ತು ರೈತರಲ್ಲಿ ಆತಂಕ ಸೃಷ್ಟಿಯಾಗಿದ್ದು, ಸಹಜ ಜೀವನ ನಡೆಸಲು ತೊಂದರೆಯಾಗುತ್ತಿದ್ದು, ಭಯದಲ್ಲಿ ಜೀವನ ನಡೆಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಸಹ ಎಚ್ಚರಿಕೆಯಿಂದ ಇರಲು ಕಿವಿಮಾತು ಹೇಳಿದ್ದೇನೆ. ಅಲ್ಲದೆ ತಾಲೂಕಿನಲ್ಲಿ ಉಪಟಳ ನಡೆಸಿರುವ ಚಿರತೆ ಸೆರೆಹಿಡಿಯಲು ಧಾರವಾಡ ಸೇರಿ ಸುತ್ತಲಿನ ಜಿಲ್ಲೆಗಳ ಸಿಬ್ಬಂದಿ ಸಹಕಾರ ಪಡೆದು ಅರಣ್ಯ ಇಲಾಖೆಯ ಮಿಂಚಿನ ಕಾರ್ಯಾಚರಣೆ ಮೂಲಕ ಚಿರತೆಯನ್ನು ಬೋನ್‌ಗೆ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ಈ ವೇಳೆ ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ಯೂಸುಫ್ ಇಟಗಿ, ಅರ್ಜುನ ರಾಠೋಡ, ದ್ಯಾಮಣ್ಣ ಗುರಿಕಾರ, ಮುತ್ತಣ್ಣ ಕೊಪ್ಪಳ, ಭೀಮರಾಯ ನಿಂಬಾಳ್ಕರ, ನಿಸಾರ ಅಲಿ ಜೂಲಕಟ್ಟಿ, ಖಾಸಿಂಸಾಬ ತೋಟದ, ಮಾಬುಸಾಬ ಮಕಾನದಾರ, ಭೀಮಪ್ಪ ಮೇಟಿ, ಶರಣಪ್ಪ ದಾಸರ ಸೇರಿ ಇತರರು ಇದ್ದರು.