ನಭದಲ್ಲಿ ನಕ್ಷತ್ರದಂತೆ ಮಿನಿ ಮಿನ ಮಿಂಚಿದ ಡ್ರೋನ್ ಗಳು; ಏಕಕಾಲದಲ್ಲಿ 3 ಸಾವಿರ ಡ್ರೋನ್ ಗಳ ಹಾರಾಟ

| Published : Sep 29 2025, 01:02 AM IST

ನಭದಲ್ಲಿ ನಕ್ಷತ್ರದಂತೆ ಮಿನಿ ಮಿನ ಮಿಂಚಿದ ಡ್ರೋನ್ ಗಳು; ಏಕಕಾಲದಲ್ಲಿ 3 ಸಾವಿರ ಡ್ರೋನ್ ಗಳ ಹಾರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್, ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ ಮಾಡುವುದು, ಕಾವೇರಿ ಮಾತೆ, ಲಕ್ಷ್ಮೀ, ಕರ್ನಾಟಕ ಭೂಪಟದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್, ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ‌, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಅದ್ಭುತ ಮನರಂಜನೆ ನೀಡಿದವು. ಡ್ರೋನ್ ಪ್ರದರ್ಶನದ ಆಕರ್ಷಣೆ ಕಣ್ತುಂಬಿಕೊಳ್ಳಲು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ರಾತ್ರಿ ಏಕಕಾಲದಲ್ಲಿ ಆಕಾಶಕ್ಕೆ ಹಾರಿದ 3 ಸಾವಿರ ಡ್ರೋನ್ ಗಳು ನಕ್ಷತ್ರದಂತೆ ಮಿನ ಮಿನುಗುತ್ತಾ ವಿವಿಧ ಕಲಾಕೃತಿಗಳನ್ನು ಸೃಷ್ಟಿಸಿದವು. ನಭದಲ್ಲಿ ಡ್ರೋನ್ ಗಳ ವೈವಿಧ್ಯಮಯ ಪ್ರದರ್ಶನವು ನೆರೆದಿದ್ದ ಸಾವಿರಾರು ಜನರ ಕಣ್ಣಿಗೆ ಬೆಳಕಿನ ಅದ್ಭುತ ಲೋಕವನ್ನು ಕಟ್ಟಿಕೊಟ್ಟವು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು (ಸೆಸ್ಕ್) ವತಿಯಿಂದ ದಸರಾ ಮಹೋತ್ಸವದ ಅಂಗವಾಗಿ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ರೋಮಾಂಚಕಾರಿ ಡ್ರೋನ್ ಪ್ರದರ್ಶನವು ಜನರ ಕಣ್ಮನ ಸೆಳೆಯಿತು. ಆಕಾಶದಲ್ಲಿ ಡ್ರೋನ್ ಗಳು ಮೂಡಿಸಿದ ಚಿತ್ತಾರವು ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು.

ಕಳೆದ ವರ್ಷ ನಡೆದ ಡ್ರೋನ್ ಪ್ರದರ್ಶನದಲ್ಲಿ 1500 ಡ್ರೋನ್ ಗಳ ಮೂಲಕ ಆಕರ್ಷಕ ಪ್ರದರ್ಶನವನ್ನು ನೀಡಲಾಗಿತ್ತು. ಆದರೆ, ಈ ಬಾರಿಯ ಪ್ರದರ್ಶನವನ್ನು ಮತ್ತಷ್ಟು ಆಕರ್ಷಣೀಯವಾಗಿಸುವ ಸಲುವಾಗಿ ಒಟ್ಟು 3000 ಡ್ರೋನ್ ಬಳಸಿಕೊಂಡು ನಡೆಸಲಾದ ಡ್ರೋನ್ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

ಸೌರಮಂಡಲ, ವಿಶ್ವಭೂಪಟ, ದೇಶದ ಹೆಮ್ಮೆಯ ಸೈನಿಕ, ನವಿಲು, ರಾಷ್ಟ್ರೀಯ ಪ್ರಾಣಿ ಹುಲಿ, ಡಾಲ್ಫಿನ್, ಈಗಲ್, ಸರ್ಪದ ಮೇಲೆ ಶ್ರೀಕೃಷ್ಣ ನೃತ್ಯ ಮಾಡುವುದು, ಕಾವೇರಿ ಮಾತೆ, ಲಕ್ಷ್ಮೀ, ಕರ್ನಾಟಕ ಭೂಪಟದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್, ಪಂಚ ಗ್ಯಾರಂಟಿ ಯೋಜನೆಗಳಿಂದ ಕೂಡಿದ್ದ ಕರ್ನಾಟಕ ಭೂಪಟ‌, ಅಂಬಾರಿ ಆನೆ, ನಾಡದೇವತೆ ಚಾಮುಂಡೇಶ್ವರಿ ಕಲಾಕೃತಿಗಳು ನೋಡುಗರಿಗೆ ಅದ್ಭುತ ಮನರಂಜನೆ ನೀಡಿದವು. ಡ್ರೋನ್ ಪ್ರದರ್ಶನದ ಆಕರ್ಷಣೆ ಕಣ್ತುಂಬಿಕೊಳ್ಳಲು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

----

ಬಾಕ್ಸ್...

ಕುನಾಲ್ ಗಾನಯಾನ

ಡ್ರೋನ್ ಪ್ರದರ್ಶನ ಆರಂಭಕ್ಕೂ ಮುನ್ನ ಖ್ಯಾತ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವೇದಿಕೆಗೆ ಬರುತ್ತಿದ್ದಂತೆ ಮೊದಲಿಗೆ ಪುನೀತ್ ರಾಜ್ ಕುಮಾರ್ ಅಭಿನಯದ ನೀನೆ... ನೀನೆ.. ಗೀತೆಯನ್ನು ಹಾಡಿ ರಂಜಿಸಿದ ಕುನಾಲ್ ಗಾಂಜಾವಾಲ, ಆ ನಂತರದಲ್ಲಿ ಖುಷಿಯಾಗಿದೆ ಏಕೋ ನಿನ್ನಿಂದಲೆ, ಒಂದೇ ಒಂದು ಸಾರಿ ಕಣ್ಮುಂದೆ ಬಾರೆ..., ನಿನ್ನ ಕಂಡ ಕ್ಷಣದಿಂದ..., ಹುಡುಗಿ ಹುಡುಗಿ ನಿನ್ನ ಕಂಡಾಗ, ಕಿವಿ ಮಾತೊಂದು ಹೇಳಲೆ ನಾನಿಂದು... ಸೇರಿದಂತೆ ಕನ್ನಡ ಮತ್ತು ಹಿಂದಿ ಗೀತೆಗಳನ್ನು ಹಾಡಿ ಪ್ರೇಕ್ಷಕರು ಕುಣಿಯುವಂತೆ ಮಾಡಿದರು.

ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಡ್ರೋನ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಸಕರಾದ ತನ್ವೀರ್ ಸೇಠ್, ಕೆ. ಶಿವಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು, ತಾಂತ್ರಿಕ ‌ವಿಭಾಗದ ನಿರ್ದೇಶಕ ಡಿ.ಜೆ. ದಿವಾಕರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್, ಎಸ್ಪಿ ವಿಷ್ಣುವರ್ಧನ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್, ದಸರಾ ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷ ರಾಘವೇಂದ್ರ ಮೊದಲಾದವರು ಇದ್ದರು.