ಕನ್ನಡಪ್ರಭ ವಾರ್ತೆ ಬೆಂಗಳೂರು

ಕನಿಷ್ಠ ವೇತನ ಹೆಚ್ಚಿಸಬೇಕೆಂಬ ಕಾರ್ಮಿಕರ ದಶಕದ ಬೇಡಿಕೆಗೆ ರಾಜ್ಯ ಸರ್ಕಾರ ಒಪ್ಪಿಕೊಂಡು ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇ.60 ರಷ್ಟು ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ.

2016-17ರಲ್ಲಿ ಕನಿಷ್ಠ ವೇತನ ಪರಿಷ್ಕರಣೆಯಾಗಿತ್ತು. ಜೀವನ ನಿರ್ವಹಣೆ ಕಷ್ಟಕರವಾಗಿದ್ದು ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕು ಎಂಬ ಒತ್ತಾಯ ಕಾರ್ಮಿಕ ಸಂಘಟನೆಗಳಿಂದ ನಿರಂತರವಾಗಿ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಮೇ 27 ರಂದು ಬೃಹತ್‌ ಹೋರಾಟ ನಡೆಸಲೂ ಕಾರ್ಮಿಕ ಸಂಘಟನೆಗಳು ಮುಂದಾಗಿದ್ದವು. ಇದರ ಬೆನ್ನಲ್ಲೇ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ.

ಕಳೆದ 2025ರ ಏಪ್ರಿಲ್‌ನಲ್ಲಿ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದೀಗ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ವೇತನ ಪರಿಷ್ಕರಣೆಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ವೇತನ ಪರಿಷ್ಕರಣೆ ಮಾಡಿದ ಮೂರನೇ ರಾಜ್ಯ ಕರ್ನಾಟಕವಾಗಿದೆ. ಈ ಮೊದಲು ಉತ್ತರ ಪ್ರದೇಶ, ಹರ್ಯಾಣ ಸರ್ಕಾರಗಳು ವೇತನ ಪರಿಷ್ಕರಣೆ ಮಾಡಿದ್ದವು.

ಇ ಕಾಮರ್ಸ್‌, ಕೊರಿಯರ್‌, ಖಾಸಗಿ ಶಾಲೆ-ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಆಸ್ಪತ್ರೆ, ಹೋಟೆಲ್‌, ಆಹಾರ ಸಂಸ್ಕರಣೆ, ಪೆಟ್ರೋಲ್‌ ಬಂಕ್‌, ಧಾರ್ಮಿಕ ಸಂಸ್ಥೆಗಳಲ್ಲಿ ದುಡಿಯುವ ಸಿಬ್ಬಂದಿ, ಖಾಸಗಿ ಫೈನಾನ್ಸ್‌ ಸೇರಿದಂತೆ 83ಕ್ಕೂ ಅಧಿಕ ಅನುಸೂಚಿತ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಇದರಿಂದ ಉಪಯೋಗವಾಗಲಿದೆ.


ಮೂರು ವಲಯ:

ವೇತನ ನಿಗದಿಗೆ ಈ ಹಿಂದೆ ನಾಲ್ಕು ವಲಯಗಳಿದ್ದವು. ಆದರೆ ಈಗ ವೇತನ ನಿಗದಿ, ಪರಿಷ್ಕರಣೆಗೆ ಮೂರು ವಲಯಗಳನ್ನು ರಚಿಸಲಾಗಿದೆ. ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಪ್ರದೇಶಗಳು ವಲಯ ಒಂದರಲ್ಲಿ ಬರಲಿವೆ. ಎರಡನೇ ವಲಯದಲ್ಲಿ ಜಿಲ್ಲಾ ಕೇಂದ್ರಗಳು ಹಾಗೂ ಮೂರನೇ ವಲಯದಲ್ಲಿ ಉಳಿದ ಪ್ರದೇಶಗಳು ಸೇರಿಕೊಳ್ಳಲಿವೆ. ಮೂರನೇ ವಲಯದ ಕೌಶಲ್ಯರಹಿತ ಕಾರ್ಮಿಕರಿಗೆ ಗರಿಷ್ಠ 19,300 ರು. ಹಾಗೂ ವಲಯ ಮೂರರ ಕೌಶಲ್ಯಯುತ ಕಾರ್ಮಿಕರಿಗೆ 31,100 ರು.ವರೆಗೂ ವೇತನ ಪರಿಷ್ಕರಿಸಲಾಗಿದೆ.

1991ರ ರೆಪ್ಟಕೋಸ್‌ ಬ್ರೆಟ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಕನಿಷ್ಠ ವೇತನ ಹೆಚ್ಚಳ ಮಾಡಲಾಗಿದೆ. ವೇತನ ಪರಿಷ್ಕರಣೆಗೆ ಮನೆಗಳಲ್ಲಿ ದಿನನಿತ್ಯ ಎಷ್ಟು ಖರ್ಚು ಮಾಡಲಾಗುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡಿ ನಿಗದಿಪಡಿಸಲಾಗಿದೆ.

ಬಾಕ್ಸ್‌.....

ಸಮರ್ಪಕ ಅನುಷ್ಠಾನವಾಗಲಿ: ಶಿವಶಂಕರ್

ಕನಿಷ್ಠ ವೇತನ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಕಾರ್ಮಿಕ ಮುಖಂಡ ಜಿ.ಆರ್‌. ಶಿವಶಂಕರ್‌ ಒತ್ತಾಯಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮೇ 27 ರಂದು ಕಾರ್ಮಿಕ ಸಂಘಟನೆಗಳಿಂದ ಹೋರಾಟ ನಡೆಸಲು ತೀರ್ಮಾನಿಸಲಾಗಿತ್ತು. ಇದಕ್ಕೂ ಮುನ್ನವೇ ಬೇಡಿಕೆ ಈಡೇರಿಸಿರುವುದು ಅಭಿನಂದನೀಯ. ಆದರೆ ವೇತನ ಹೆಚ್ಚಳವನ್ನು ಕಾರ್ಮಿಕ ಇಲಾಖೆಯು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.