ಗಣಿಗಾರಿಕೆಯಿಂದ ಭೂಮಿಯ ಅನೇಕ ಸಂಪನ್ಮೂಲ ನಾಶ

| Published : Dec 16 2023, 02:01 AM IST

ಸಾರಾಂಶ

ಲೋಹ ಭೂಮಿಯ ಒಂದು ಭಾಗವಾಗಿದ್ದು, ಲೋಹಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಇದಕ್ಕೆ ಸಂಬಂಧಿಸಿದ ಜಾಗತಿಕ ‌ಮಟ್ಟದಲ್ಲಿ ಅನೇಕ ಅನ್ವೇಷಣೆಗಳು ನಡೆಯುತ್ತಲಿವೆ. ಅನೇಕ ವಿಶಿಷ್ಠವಾದ ಲೋಹಗಳನ್ನು ಭುಮಿಯ ಮೇಲೆ ಕಾಣಬಹುದು ಎಂದ ಅವರು ಜಾಗತಿಕವಾಗಿ ಚೀನಾ, ಅಮೇರಿಕಾ ದೇಶಗಳು ಭೂಮಿಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ ಎಂದು ಪ್ರೊ. ಲಿಂಡ್ಸೆ ಗ್ರೀರ್ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಭವಿಷ್ಯತ್ತಿನಲ್ಲಿ ಭೂಮಿಯ ಅಪರೂಪದ ಸಂಪನ್ಮೂಲಗಳನ್ನು ಉಳಿಸಿಕೊಳ್ಳಬೇಕಾದ ಸವಾಲು ಸಮುದಾಯದ ಮೇಲಿದೆ. ಗಣಿಗಾರಿಕೆಯಿಂದ ಭೂಮಿಯ ಅನೇಕ ಸಂಪನ್ಮೂಲಗಳು ನಶಿಸುತ್ತಿವೆ ಎಂದು ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ವಸ್ತು ವಿಜ್ಞಾನ ಮತ್ತು ಲೋಹಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಲಿಂಡ್ಸೆ ಗ್ರೀರ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ ಸಭಾಂಗಣದಲ್ಲಿ ಡಾ. ಡಿ.ಸಿ. ಪಾವಟೆ ಫೌಂಡೇಷನ್ ಸ್ಮಾರಕ ಮೂಲತತ್ವ ಉಪನ್ಯಾಸದಲ್ಲಿ ''''ಅಪರೂಪದ ಭೂಮಿಯ ಉಲ್ಕೆಗಳು ಮತ್ತು ಆಯಸ್ಕಾಂತಗಳು'''' ವಿಷಯದ ಕುರಿತು ಮಾತನಾಡಿದರು.

ಲೋಹ ಭೂಮಿಯ ಒಂದು ಭಾಗವಾಗಿದ್ದು, ಲೋಹಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಇದಕ್ಕೆ ಸಂಬಂಧಿಸಿದ ಜಾಗತಿಕ ‌ಮಟ್ಟದಲ್ಲಿ ಅನೇಕ ಅನ್ವೇಷಣೆಗಳು ನಡೆಯುತ್ತಲಿವೆ. ಅನೇಕ ವಿಶಿಷ್ಠವಾದ ಲೋಹಗಳನ್ನು ಭುಮಿಯ ಮೇಲೆ ಕಾಣಬಹುದು ಎಂದ ಅವರು ಜಾಗತಿಕವಾಗಿ ಚೀನಾ, ಅಮೇರಿಕಾ ದೇಶಗಳು ಭೂಮಿಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿವೆ ಎಂದರು.

ಲೋಹವನ್ನು ವೈದ್ಯಕೀಯ ಸೇರಿದಂತೆ ಅನೇಕ ವಿವಿಧ ಕ್ಷೇತ್ರದಲ್ಲಿ ಬೇರೆ-ಬೇರೆ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ. ಆಯಸ್ಕಾಂತ ಇಂದು ಮಾರುಕಟ್ಟೆಯ ಒಂದು ಉತ್ಪನ್ನವಾಗಿದೆ. ಪ್ರಸ್ತುತ ಲೋಹವನ್ನು ವೈಜ್ಞಾನಿಕವಾಗಿ ಮರು ವ್ಯಾಖ್ಯಾನ ಮಾಡಲಾಗುತ್ತದೆ ಎಂದರು.

ಕ್ಯಾಂಬ್ರಿಡ್ಜ್ ಸಿಡ್ನಿ ಸೆಸಕ್ಸ ಕಾಲೇಜಿನ ಇಂಟರ್ ನ್ಯಾಶನಲ್ ರಿಲೇಶನ್ಸ್ ವಿಷಯದ ಪ್ರಾಧ್ಯಾಪಕ ಪ್ರೊ. ಜೇಮ್ಸ್ ಮಯಾಲ್ ಮಾತನಾಡಿ, ಕರ್ನಾಟಕ ವಿಶ್ವವಿದ್ಯಾಲಯದ ಜೊತೆಗೆ ಸಂಬಂಧ ಹೊಂದಿರುವದು ನನ್ನ ಸುದೈವ ಎಂದರು.

ಉಪನ್ಯಾಸದ ಸಂಯೋಜಕ ಡಾ. ಬಿ.ಎಚ್. ನಾಗೂರ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಇಂಗ್ಲೆಂಡಿನ ಸಿಡ್ನಿ ಸೆಸಕ್ಸ್ ಕಾಲೇಜಿನ ಸಹಯೋಗದಲ್ಲಿ ಪ್ರತಿವರ್ಷ ಮೂರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಫೆಲೋಶಿಪ್ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಾಲ್ಕು ತಿಂಗಳ ವರೆಗೆ ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಅವಕಾಶವಿದೆ ಎಂದರು. ಪ್ರಸ್ತುತ ವರ್ಷದಲ್ಲಿ ಡಾ. ಡಿ.ಸಿ. ಪಾವಟೆ ಫೌಂಡೇಶನ್ ಫೆಲೋಶಿಪ್‌ಗೆ ಖಲೀಲ್ ಅಹ್ಮದ ದಿಲಷಾದ, ಸಂಜನಾ ಕೃಷ್ಣನ್ ಆಯ್ಕೆ ಆಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ, ಡಾ. ಡಿ.ಸಿ. ಪಾವಟೆ ಕರ್ನಾಟಕ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳಿಸಿದವರಲ್ಲಿ ಒಬ್ಬರು. ದೇಶದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಬೆಳೆಸುವಲ್ಲಿ ಪಾವಟೆ ಅವರ ಕೂಡುಗೆ ಬಹಳ ಇದೆ ಎಂದರು.

ಕಳೆದ ವರ್ಷಗಳಿಂದ ಪಾವಟೆ ಫೌಂಡೇಶನ್ ಪ್ರತಿಭಾವಂತ ಸಂಶೋಧಕರನ್ನು ಗುರುತಿಸುವಲ್ಲಿ ತನ್ನದೇ ಪಾತ್ರವನ್ನು ಹೊಂದಿದೆ ಎಂದರು.

ಕವಿವಿ ಕುಲಸಚಿ ಡಾ. ಎ. ಚನ್ನಪ್ಪ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎನ್.ವೈ. ಮಟ್ಟಿಹಾಳ್, ಡಾ. ರವೀಂದ್ರ ಕಾಂಬಳೆ ಇದ್ದರು.