7 ದಿನದಲ್ಲಿ ನನ್ನ ಮೇಲಿನ ಆರೋಪ ಸಾಬೀತುಪಡಿಸಿ

| Published : Jul 28 2024, 02:06 AM IST

ಸಾರಾಂಶ

ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಅಕ್ರಮವಾಗಿ ಎಂಡಿಎ ಅಥವಾ ಗೃಹ ಮಂಡಳಿಯಿಂದ ಒಂದು ನಿವೇಶನ ಪಡೆದಿದ್ದರೆ, ಸಾಬೀತುಪಡಿಸಲಿ.

ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಇಬ್ಬರು ರೈತರಿಗೆ 50:50 ಅನುಪಾತದಲ್ಲಿ ನ್ಯಾಯದೊರಕಿಸಿಕೊಡುವಂತೆ ನಾನು ಬರೆದ ಪತ್ರವನ್ನಿಟ್ಟುಕೊಂಡು ನನಗೆ ನಿವೇಶನ ನೀಡಿರುವುದಾಗಿ ಹೇಳಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಏಳು ದಿನಗಳೊಳಗೆ ಸ್ಪಷ್ಟನೆ ನೀಡದಿದ್ದರೆ ನೊಟೀಸ್ ಜಾರಿಗೊಳಿಸುವುದಾಗಿ ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಅಕ್ರಮವಾಗಿ ಎಂಡಿಎ ಅಥವಾ ಗೃಹ ಮಂಡಳಿಯಿಂದ ಒಂದು ನಿವೇಶನ ಪಡೆದಿದ್ದರೆ, ಸಾಬೀತುಪಡಿಸಲಿ. ಗೋವಿಂದರಾಜ್ ಎಂಡಿಎ ಅಧ್ಯಕ್ಷರಾಗಿದ್ದಾಗ ಅನೇಕರು ನಿಯಮದಂತೆ ಅರ್ಜಿ ಸಲ್ಲಿಸಿದ್ದೆವು. ಆಗ ಲಾಟರಿಯಲ್ಲಿ ನನಗೆ 50x80 ಅಳತೆಯ ನಿವೇಶನ ಲಭಿಸಿತು.

ನನ್ನ ತಂದೆ ನನಗೆ 18 ಎಕರೆ ಜಮೀನು ನೀಡಿದ್ದರು. ಅದನ್ನು ಉತ್ತು, ಬೆಳೆದು ಜೀವನ ನಡೆಸಿದ್ದೇನೆ. ಇದರ ಜೊತೆಗೆ ಸಮೀಪದಲ್ಲಿಯೇ 15 ಎಕರೆ ಜಮೀನು ಪಡೆದಿದ್ದೇನೆ ಎಂದರು.

ಅದನ್ನು ಹೊರತುಪಡಿಸಿ ಗೃಹ ಮಂಡಳಿಯಲ್ಲಾಗಲಿ, ಎಂಡಿಎ ವತಿಯಿಂದಾಗಲಿ ಒಂದೇ ಒಂದು ನಿವೇಶನವನ್ನೂ ಪಡೆದಿಲ್ಲ. ಆ ನಿವೇಶನ ದೊರಕುವ ಮುನ್ನ ನಾನು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೆ. ನಾನು ಅನೇಕ ಬಾರಿ ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ, ಗೃಹಮಂಡಳಿ ಅಧ್ಯಕ್ಷನಾಗಿದ್ದೆ. ಆದರೂ ನನ್ನ ಹೆಸರಿನಲ್ಲಾಗಲಿ, ನನ್ನ ಕುಟುಂಬ ವರ್ಗದವರ ಹೆಸರಿನಲ್ಲಾಗಲಿ ಒಂದು ವಾಣಿಜ್ಯ ಸಂಕೀರ್ಣ, ಶಾಲೆ, ಕಲ್ಯಾಣ ಮಂಟಪ, ಹೊಟೇಲ್ ಮಾಡಿದ್ದರೆ ತಿಳಿಸಲಿ. ರಾಜ್ಯದ ಎಲ್ಲಾ ಶಾಸಕರು ಮಾಡಿರುವ ಆಸ್ತಿಯೂ ತನಿಖೆಯಾಗಲಿ, ನಾನು ಇಷ್ಟು ವರ್ಷದ ರಾಜಕೀಯದಲ್ಲಿ ನಾನೆಷ್ಟು ಆಸ್ತಿ ಮಾಡಿದ್ದೇನೆ ಎಂಬುದೂ ತನಿಖೆಯಾಗಲಿ. ನನ್ನಷ್ಟು ಪ್ರಾಮಾಣಿಕವಾಗಿ ಇರುವ ಶಾಸಕರನ್ನು ತೋರಿಸಲಿ. ನಾನು ಈಗಲೂ ನಂಬಿರುವುದು ಜನರನ್ನೇ ಎಂದರು.

ಮುಖ್ಯಮಂತ್ರಿಗಳ ಪಕ್ಕ ಕುಳಿತು ಮಾತನಾಡಿದ ಸಚಿವರು (ಭೈರತಿ ಸುರೇಶ್) ಮಾದಗಳ್ಳಿಯಲ್ಲಿ ಒಂದು ಎಕರೆ ಜಾಗ ಕೊಟ್ಟಿದ್ದೇವೆ ಎಂದಿದ್ದಾರೆ. ಅವರು ಪ್ರಾಮಾಣಿಕವಾಗಿ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ ಇಂತಹ ಪ್ರಮಾದ ಆಗುತ್ತಿರಲಿಲ್ಲ. ಸಿದ್ದರಾಮಯ್ಯ ಅವರಂತವರು ಈ ಸುಳಿಯಲ್ಲಿ ಸಿಲುಕುತ್ತಲೂ ಇರಲಿಲ್ಲ ಎಂದು ಕಟುವಾಗಿ ಟೀಕಿಸಿದರು.

ಭಾಗ್ಯ ಶಿವಮೂರ್ತಿ ಅವರಿಗೆ ಸೇರಿದ 2 ಎಕರೆ ಜಮೀನನ್ನು ಎಂಡಿಎ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಪರಿಹಾರ ಕೊಟ್ಟಿರಲಿಲ್ಲ. ಅವರು ನನ್ನ ಬಳಿ ಬಂದು ಪರಿಹಾರ ನೀಡಿಲ್ಲ. ಆದ್ದರಿಂದ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ಕೊಡಿಸಿ ಎಂದು ಕೋರಿದ್ದರು. ಇದೇ ರೀತಿ ಮತ್ತೊಬ್ಬ ರೈತರೂ ಕೂಡ ಕೇಳಿದ್ದರು. ಇವರಿಬ್ಬರಿಗೂ ಪರಿಹಾರ ಕೊಡಿ, ಇಲ್ಲವಾದರೆ 50:50 ಅನುಪಾತದಂತೆ ಕ್ರಮವಹಿಸಿ ಎಂದು ಪತ್ರಕೊಟ್ಟಿದ್ದೆ. ಅದನ್ನು ಇಟ್ಟುಕೊಂಡು ನನಗೆ ನಿವೇಶನ ಕೊಟ್ಟಿರುವುದಾಗಿ ಹೇಳಿದ್ದಾರೆ ಎಂದರು.

ನನ್ನ ಕ್ಷೇತ್ರದಲ್ಲಿ ಇಬ್ಬರು ರೈತರಿಗೆ ಪತ್ರ ಕೊಟ್ಟಿದ್ದೇನೆ. ನನ್ನನ್ನು ನಂಬಿದ ರೈತರಿಗೆ ಪರಿಹಾರ ಕೊಡಿಸಬೇಕಿರುವುದು ನನ್ನ ಕರ್ತವ್ಯ. ಇದನ್ನು ನೋಡದೆ ನೀವು ಕಲೆಕ್ಷನ್ ಮಾಡಲು ಇಟ್ಟುಕೊಂಡವರ ಮಾತು ಕೇಳಿ ನನ್ನ ಬಗ್ಗೆ ಮಾತನಾಡಿದ್ದೀರಿ. ನೀವು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದರೆ ಸಿಎಂ ಮೇಲೆ ಇಂತ ಆರೋಪ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.

ಧಮ್ ಇದ್ರೆ ತನಿಖೆ ಮಾಡಿ

ನನ್ನ ಹೆಸರಿನಲ್ಲಿ ಅಥವಾ ನನ್ನ ಕುಟುಂಬದವರ ಹೆಸರಿನಲ್ಲಿ ಎಷ್ಟು ಆಸ್ತಿ ಇದೆ ಎಂಬುದನ್ನು ತಿಳಿದುಕೊಂಡು ಮಾತನಾಡಿ. ನಿಮಗೆ ಧಮ್ಇದ್ದರೆ ಎಲ್ಲಾ ಶಾಸಕರದ್ದು ತನಿಖೆ ಮ ಆಡಿಸಿ. ಎಲ್ಲರೂ ಪ್ರಾಮಾಣಕರು, ಸತ್ಯಹರಿಶ್ಚಂದ್ರರಾ? ಸಿಎಂ, ಸಚಿವರು, ಶಾಸಕರು ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಿ. ಈ ಬಗ್ಗೆ ಸಚಿವರು ಏಳು ದಿನಗಳ ಒಳಗೆ ಉತ್ತರ ಕೊಡಬೇಕು. ತಪ್ಪಿದರೆ ನಾನೇ ನೊಟೀಸ್ ಕೊಡುತ್ತೇನೆ. ನನ್ನ ಹೆಸರಿಗೆ ಕಳಂಕ ತಂದಿರುವುದಕ್ಕೆ ಕಾರಣ ಕೇಳುತ್ತೇನೆ ಎಂದರು.

ಪ್ರಾಧಿಕಾರಗಳಲ್ಲಿ ಹಣವಿಲ್ಲ

ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಹಣ ಇಲ್ಲ. ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಕೊಡದೆ ಅನೇಕ ಪ್ರಕರಣ ನ್ಯಾಯಾಲಯದಲ್ಲಿವೆ. ಆದ್ದರಿಂದ ಸರ್ಕಾರ ನಗರ ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ 50:50 ಅನುಪಾತ, ಗ್ರಾಮಾಂತರ ಪ್ರದೇಶದಲ್ಲಿ 60:40 ಅನುಪಾತ ಜಾರಿಗೊಳಿಸಿದ್ದಾಗಿ ಅವರು ಹೇಳಿದರು.

ಈಗ 50:50 ರೈತರಿಗೆ ಪರಿಹಾರ ನೀಡಬೇಕು. ಇಲ್ಲವೇ ಜಮೀನು ಹಿಂದಿರುಗಿಸಬೇಕು. ಇದನ್ನು ಬಿಟ್ಟು ಸರ್ಕಾರದ ಬಳಿ ಬೇರೆ ಮಾರ್ಗವಿಲ್ಲ. ಪ್ರಾಧಿಕಾರ ನಡೆಯುವುದೇ ಕಷ್ಟ ಎಂದರು.

---

ಕೋಟ್

ನೀವು ಜವಾಬ್ದಾರಿಯಿಂದ ನೋಡಿಕೊಂಡಿದ್ದರೆ ಯಾರ ಬಂಡವಾಳ ಏನು ಎಂಬುದನ್ನುನೀವೇ ಹೇಳುತ್ತಿದ್ದಿರಿ. ಅಧಿಕಾರಿಗಳನ್ನು ನಿಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಿತ್ತು.

- ಜಿ.ಟಿ. ದೇವೇಗೌಡ, ಶಾಸಕರು