ಕತ್ತರಘಟ್ಟ ಗ್ರಾಮಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ

| Published : Aug 03 2024, 12:34 AM IST

ಕತ್ತರಘಟ್ಟ ಗ್ರಾಮಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಘಟನೆಯಲ್ಲಿ ಗಾಯಗೊಂಡಿರುವ ಇದೇ ಕುಟುಂಬದ ಮೂವರು ಸದಸ್ಯರಾದ ಝಾನ್ಸಿರಾಣಿ, ಈಕೆಯ ಪತಿ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇವರು ಗಂಭೀರವಾಗಿ ಗಾಯಗೊಂಡಿದ್ದು ಕೇರಳದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೇರಳದ ವಯನಾಡು ಗುಡ್ಡ ಕುಸಿತದಲ್ಲಿ ಮೃತಪಟ್ಟ ತಾಲೂಕಿನ ಕತ್ತರಘಟ್ಟ ಗ್ರಾಮದ ಪುಟ್ಟ ಬಾಲಕ ನಿಹಾಲ್ ಮತ್ತು ಆತನ ಅಜ್ಜಿ ಲೀಲಾವತಿ ಅವರ ನಿವಾಸಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಜಿಲ್ಲಾಡಳಿತದ ಜೊತೆಗೂಡಿ ಮೃತರ ನಿವಾಸಕ್ಕೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ ಘಟನೆ ಬಗ್ಗೆ ಕುಟುಂಬದ ಸದಸ್ಯರು ಮೂಲಕ ಮಾಹಿತಿ ಪಡೆದರು. ಪ್ರಾಕೃತಿಕ ವಿಕೋಪಕ್ಕೆ ಬಲಿಯಾದವರ ಬಗ್ಗೆ ಸಂತಾಪ ಸೂಚಿಸಿದರು.

ಮೃತರ ಮನೆಯಿಂದಲೇ ಕೇರಳದಲ್ಲಿರುವ ಸಚಿವ ಸಂತೋಷ್ ಲಾಡ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಘಟನೆಯಲ್ಲಿ ಬಲಿಯಾದ ಕುಟುಂಬದ ಸದಸ್ಯರ ನೋವಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ ಎಂದರು.

ಸಚಿವ ಸಂತೋಷ್ ಲಾಡ್ ಮತ್ತು ಉನ್ನತ ದರ್ಜೆ ಅಧಿಕಾರಿ ಪಿ.ಸಿ.ಜಾಫರ್ ಅವರನ್ನು ಕೇರಳದ ದುರಂತದಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ನೇಮಿಸಲಾಗಿದೆ. ದುರಂತದಲ್ಲಿ ಮಡಿದ ಲೀಲಾವತಿ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರು. ಪರಿಹಾರ ನೀಡಲಾಗುವುದು. ಪರಿಹಾರ ಸಂಬಂಧ ಈ ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಅಗತ್ಯ ವರದಿ ನೀಡಲಿದ್ದಾರೆ ಎಂದು ಹೇಳಿದರು.

ಘಟನೆಯಲ್ಲಿ ಬಲಿಯಾದ ನಿಹಾಲ್ ಪುಟ್ಟ ಬಾಲಕ. ಈತನ ಸಾವಿಗೆ 5 ಲಕ್ಷ ಪರಿಹಾರ ನೀಡಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ. ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗದಿದ್ದರೂ ಕನಿಷ್ಠ 2-3 ಲಕ್ಷ ರು. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ನಂತರ ತಾತ್ಕಾಲಿಕ ವೈಯಕ್ತಿಕವಾಗಿ ಹಣಕಾಸಿನ ನೆರವು ನೀಡಿದರು.

ಘಟನೆಯಲ್ಲಿ ಗಾಯಗೊಂಡಿರುವ ಇದೇ ಕುಟುಂಬದ ಮೂವರು ಸದಸ್ಯರಾದ ಝಾನ್ಸಿರಾಣಿ, ಈಕೆಯ ಪತಿ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇವರು ಗಂಭೀರವಾಗಿ ಗಾಯಗೊಂಡಿದ್ದು ಕೇರಳದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದರು.

ಮನೆ ಕಳೆದುಕೊಂಡಿರುವ ಕುಟುಂಬಕ್ಕೆ ಕೇರಳ ಸರ್ಕಾರವೇ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗ ನೀಡುವಂತೆ ಕೇಳಿಕೊಂಡಿದ್ದಾರೆ. ಜಿಲ್ಲೆ ಅಥವಾ ತಾಲೂಕು ಮಟ್ಟದಲ್ಲಿ ಉದ್ಯೋಗ ನೀಡುವ ಸಂಬಂಧ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಡೀಸಿ ಡಾ.ಕುಮಾರ್ , ಎಸ್ಪಿ ಮಲ್ಲಿಕಾರ್ಜುನ ಬಾನದಂಡಿ, ಎಸಿ ನಂದೀಶ್ , ತಹಸೀಲ್ದಾರ್ ನಿಸರ್ಗಪ್ರಿಯ, ಲೋಕಸಭೆ ಪರಾಜಿತ ಅಭ್ಯರ್ಥಿ ಸ್ಟಾರ್ ಚಂದ್ರು, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮುಖಂಡ ಎಂ.ಡಿ.ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್ ಸೇರಿದಂತೆ ಮುಖಂಡರು ಇದ್ದರು.