ಸಾರಾಂಶ
ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಸಾಮೂಹಿಕವಾಗಿ ರಜೆ ತೆರಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದು ಕೂಲಂಕಷವಾಗಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರಿಗೆ ಸೂಚಿಸಿದ್ದೇನೆ. ವರದಿ ಆಧರಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಸಾಮೂಹಿಕವಾಗಿ ರಜೆ ಪಡೆದು ಪ್ರವಾಸ ತೆರಳಿದ ವಿಷಯ ತಿಳಿದು ಶನಿವಾರ ಜಿಲ್ಲಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿಬ್ಬಂದಿಗಳಿಗೆ ರಜೆ ನೀಡಿ ಜಿಲ್ಲಾಶಸ್ತ್ರ ಚಿಕಿತ್ಸಕರು ಆಡಳಿತದಲ್ಲಿ ಎಡವಿದ್ದಾರೆ. 15 ಸಿಬ್ಬಂದಿಗಳ ಪೈಕಿ 8 ಜನರಿಗೆ ರಜೆ ನೀಡಿದ್ದಾರೆ. ಹಾಜರಾತಿ, ರಜೆ ಅರ್ಜಿ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲನೆಗೆ ನೀಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಿಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ನೂರಕ್ಕೆ ನೂರಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಮೇಯವಿಲ್ಲ ಎಂದರು. ಸೇವಾ ಮನೋಭಾವದ ವೈದ್ಯರು ಜಿಲ್ಲೆಗೆ ಬೇಕು. ಜನರಿಗೆ ಸರಿಯಾದ ರೀತಿಯಲ್ಲಿ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ, ವೈದ್ಯರು, ಶೂಶ್ರೂಷಕರು, ರಕ್ಷಣಾ ಸಿಬ್ಬಂದಿ ಕೊರತೆಯಿದೆ. ಇದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಸಾಮೂಹಿಕವಾಗಿ ರಜೆ ತೆರಳಿದ ಸಿಬ್ಬಂದಿ ಪೈಕಿ ವೈದ್ಯಕೀಯ ಹಾಗೂ ಶೂಶ್ರೂಷಕ ಸಿಬ್ಬಂದಿ ಸಹ ಇರುವುದಾಗಿ ಮಾಹಿತಿಯಿದೆ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.ಇದೇ ವೇಳೆ ಸಚಿವ ಡಿ.ಸುಧಾಕರ್ ವಿವಿಧ ವಾರ್ಡ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತುರ್ತು ಚಿಕಿತ್ಸಾ ಘಟಕ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಒಳರೋಗಿಗಳ ಸ್ಥಿತಿಗತಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಸೇರಿದಂತೆ ಜಿಲ್ಲಾಸ್ಪತ್ರೆಯ ವೈದ್ಯರು ಇದ್ದರು.