ಸಾರಾಂಶ
ಭೂ ಸುರಕ್ಷಾ ಯೋಜನೆಯಡಿ ಅಭಿಲೇಖಾಲಯದ ಎಲ್ಲ ದಾಖಲೆಗಳ ಗಣಕೀಕರಣಕ್ಕೆ ನಗರದ ಮಿನಿವಿಧಾನಸೌಧದಲ್ಲಿ ಶನಿವಾರ ಬೃಹತ್ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಭೂ ಸುರಕ್ಷಾ ಯೋಜನೆಯಡಿ ಅಭಿಲೇಖಾಲಯದ ಎಲ್ಲ ದಾಖಲೆಗಳ ಗಣಕೀಕರಣಕ್ಕೆ ಬೃಹತ್ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ ನೀಡಿದರು. ನಗರದ ಮಿನಿವಿಧಾನಸೌಧದಲ್ಲಿ ಶನಿವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಎಲ್ಲ ದಾಖಲೆಗಳ ಡಿಜಿಟಲೀಕರಣದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ತಾಲೂಕು ಕಚೇರಿಯನ್ನು 100 ದಿನಗಳೊಳಗಾಗಿ ಸಂಪೂರ್ಣ ಗಣಕೀಕರಣ ಆಯ್ಕೆ ಮಾಡಿಕೊಂಡಿದ್ದು, ಜಿಲ್ಲೆಯ ವಿಜಯಪುರ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಜಯಪುರ, ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ದಾಖಲೆಗಳು ಆಧುನೀಕರಣ ಯೋಜನೆಯಡಿ ಡಿಜಿಟಲೀಕರಣಗೊಳ್ಳಲಿವೆ ಎಂದರು.ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಪ್ರಮುಖ ದಾಖಲೆಗಳ ಗಣಕೀಕರಣಗೊಳಿಸುವ ನಿಟ್ಟಿನಲ್ಲಿ ದಾಖಲೆಗಳ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್ ಹಾಗೂ ಡಾಟಾ ಎಂಟ್ರಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ದಾಖಲೆಗಳನ್ನು ಅಪಲೋಡ್ ಮಾಡಲು ರಾಜ್ಯದ ಪ್ರತಿ ಅಭಿಲೇಖಾಲಯದ ವಿಷಯ ನಿರ್ವಾಹಕರು, ಶಿರಸ್ತೇದಾರ, ತಹಸೀಲ್ದಾರರು ಹಾಗೂ ಸಹಾಯಕ ಆಯುಕ್ತರ ಲಾಗಿನ್‌ಗಳನ್ನು ಸೃಜನೆ ಮಾಡಲಾಗಿದ್ದು, ವಿಜಯಪುರ, ಬಬಲೇಶ್ವರ ಮತ್ತು ತಿಕೋಟಾ ತಾಲೂಕಿನ ಅಭಿಲೇಖಾಲಯದಲ್ಲಿರುವ ಒಟ್ಟು 5,181,634 ಕಡತಗಳು ನೂರು ದಿನಗಳಲ್ಲಿ ಸ್ಕ್ಯಾನಿಂಗ್ ಹಾಗೂ ಗಣಕೀಕರಣ ಮಾಡುವ ಗುರಿ ಹೊಂದಲಾಗಿದೆ. ಭೂದಾಖಲೆಗಳ ಆಧುನಿಕರಣದಿಂದ ದಾಖಲೆಗಳು ಶಿಥಿಲವಾಗುವುದು, ನಕಲು ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಿ ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗಲಿದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ತಹಸೀಲ್ದಾರ್ ಕವಿತಾ ಮುಂತಾದವರು ಇದ್ದರು.ಭೂ ಸುರಕ್ಷಾ ಯೋಜನೆಯಡಿ ಅಭಿಲೇಖಾಲಯದ ಎಲ್ಲ ದಾಖಲೆಗಳ ಗಣಕೀಕರಣಕ್ಕೆ ನಗರದ ಮಿನಿವಿಧಾನಸೌಧದಲ್ಲಿ ಶನಿವಾರ ಬೃಹತ್ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ ನೀಡಿದರು.