ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಅಲೆಮಾರಿ ಕುರಿಗಾಹಿಗಳ ಹಿತ ಕಾಯಲು ಸಲ್ಲಿಸಿದ್ದ 18 ಬೇಡಿಕೆಗಳ ಪೈಕಿ 6 ಬೇಡಿಕೆಗಳ ಬಜೆಟ್‌ನಲ್ಲಿ ಘೋಷಿಸಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕುರುಬ ಸಮಾಜ, ರಾಜ್ಯ ಅಲೆಮಾರಿ ಕುರುಬ ಕುರಿಗಾಹಿಗಳ ಸಂಘವು ಕೃತಜ್ಞತೆ ಅರ್ಪಿಸಿವೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಸ್.ಎಸ್.ಗಿರೀಶ, ಕುರಿಗಾಹಿಗಳಿಗೆ ಗುರುತಿನ ಚೀಟಿ, ಸಂಚಾರಿ ಕುರಿಗಾಹಿಗಳಿಗೆ ಅರಣ್ಯ, ಪೊಲೀಸ್ ಇಲಾಖೆ, ಮತ್ತಿತರರಿಂದ ಆಗುತ್ತಿರುವ ಶೋಷಣೆ, ದೌರ್ಜನ್ಯ ತಡೆಗೆ ವಿಶೇಷ ಕಾನೂನು ರೂಪಿಸುವುದು, ಕುರಿಗಾಹಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಕಲ್ಪಿಸುವುದು, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಪ್ರಸಕ್ತ ಸಾಲಿನಲ್ಲಿ ಮುಂದುವರಿಸಿ, 10 ಸಾವಿರ ಫಲಾನುಭವಿಗಳಿಗೆ ಸಹಾಯಧನ ನೀಡುವುದೂ ಸೇರಿ 6 ಬೇಡಿಕೆಗಳ ಸರ್ಕಾರ ಈಡೇರಿಸಿದೆ ಎಂದು ತಿಳಿಸಿದರು.
ಅನಕ್ಷರಸ್ಥ ಸಂಚಾರಿ ಕುರಿಗಾಹಿಗಳಿಗೆ ಆತ್ಮರಕ್ಷಣೆಗಾಗಿ ಬಂದೂಕು ತರಬೇತಿ ನೀಡಿ, ಲೈಸೆನ್ಸ್ ನೀಡಬೇಕು. ಸರ್ಕಾರದಿಂದ ವಿಮಾ ಸೌಲಭ್ಯ ಕಲ್ಪಿಸಬೇಕು. ಕುರಿಗಾಹಿಗಳ ಮಕ್ಕಳಿಗೆ ಟೆಂಟ್ ಶಾಲೆಗಳ ಸ್ಥಾಪಿಸಬೇಕು. ಸರ್ಕಾರದಿಂದ ಪಶು ವೈದ್ಯಕೀಯ ಔಷಧಿ ಅಂಗಡಿಗಳನ್ನು ಜನರಿಕ್ ಮಾದರಿಯಲ್ಲಿ ರಾಜ್ಯಾದ್ಯಂತ ಸ್ಥಾಪಿಸಬೇಕು. ಪಶು ಆಹಾರ ಮತ್ತು ಮೇವಿನ ಬೀಜ ಉಚಿತವಾಗಿ ನೀಡಬೇಕು. ಸಂಚಾರಿ ಕುರಿಗಾಹಿಗಳಿಗೆ ಸಬ್ಸಿಡಿ ದರದಲ್ಲಿ ಕುರಿ ಮೇಕೆಗಳನ್ನು ಖರೀದಿಸಲು ಸಾಲ ಸೌಲಭ್ಯವು ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.ಬಿತ್ತನೆ ಕಾಲ, ಮಳೆಗಾಲದಲ್ಲಿ ಅರಣ್ಯದಲ್ಲಿ ಕುರಿ, ಮೇಕೆ ಮೇಯಿಸಲು ಸರ್ಕಾರ ಅನುಮತಿ ನೀಡಬೇಕು. ಸರ್ಕಾರದಿಂದ ಕುರಿಗಾಹಿಗಳಿಗೆ ಟೆಂಟ್, ಸೋಲಾರ್ ಬ್ಯಾಟರಿ, ರೈನ್ ಕೋಟ್, ಸಲಕರಣೆ ನೀಡಬೇಕು. ಕುರಿಗಾಹಿಗಳ ಮಕ್ಕಳಿಗಾಗಿ ವಸತಿ ಶಾಲೆ ಸ್ಥಾಪಿಸಬೇಕು, ಕುರಿಗಾಹಿಗಳಿಗೆ ವಿಮಾ ಸೌಲಭ್ಯ ಜಾರಿಗೊಳಿಸಬೇಕು. ಕುರಿ ನಿಗಮ ಹಾಗೂ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾ ಮಂಡಲವು ಅನೇಕ ವರ್ಷದಿಂದ ಜಿಲ್ಲಾವಾರು ಶುರುವಾಗಿದ್ದರೂ, ಮೂಲ ಸಂಚಾರಿ ಕುರಿಗಾಹಿಗಳಿಗೆ ಸೌಕರ್ಯ ದೊರಕುವಲ್ಲಿ ಸಂಚಾರಿ ಕುರಿಗಾಹಿಗಳು ವಂಚಿತರಾಗಿದ್ದಾರೆ. ಹಿಂದುಳಿದ ವರ್ಗ, ದಲಿತರು, ಕುರುಬರು, ಗೊಲ್ಲರು ಹೀಗೆ ಎಲ್ಲಾ ವರ್ಗದವರೂ ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ ಎಂದು ಎಸ್.ಎಸ್.ಗಿರೀಶ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಕುರುಬ ಸಮಾಜದ ಮುಖಂಡರು, ಸಂಘದ ಖಜಾಂತಿ ದೀಪಕ್ ಬಿ.ಜೋಗಪ್ಪನವರ್, ಕಾರ್ಯದರ್ಶಿ ಕೆ.ರೇವಣ್ಣ, ಸಂಘಟನಾ ಕಾರ್ಯದರ್ಶಿ ಕೆ.ಎಂ.ಬಸವರಾಜ, ಚಂದ್ರಮೌಳಿ ಇತರರಿದ್ದರು. ...