ಸಾರಾಂಶ
ಕಾರವಾರ: ಒಂದೇ ಕಾಮಗಾರಿಗೆ ಕ್ರೆಡಿಟ್ ಪಡೆಯಲು ಹಾಲಿ ಸಚಿವರು, ಮಾಜಿ ಶಾಸಕರ ನಡುವೆ ಪೈಪೋಟಿ ಏರ್ಪಟ್ಟಿದೆ.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮಂಜೂರಾದ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ) ನಿರ್ಮಾಣದ ಕ್ರೆಡಿಟ್ ಪಡೆಯಲು ಹಾಲಿ ಸಚಿವ ಮಂಕಾಳ ವೈದ್ಯ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ನಡುವೆ ಪೈಪೋಟಿ ನಡೆದಿದೆ. ಈ ಕಾಮಗಾರಿಗೆ ಮಂಜೂರಾತಿ ತಾವು ಮಾಡಿಸಿದ್ದಾಗಿದೆ ಎಂದು ಹಾಕಿಕೊಂಡಿದ್ದಾರೆ.ಮಾಜಿ ಶಾಸಕ ಸುನೀಲ ಅವರು, ತಮ್ಮ ಅವಧಿಯಲ್ಲಿ ₹೪.೫೭ ಕೋಟಿ ಸರ್ಕಾರದಿಂದ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾಮಗಾರಿ ಮುಗಿದು ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಸಚಿವ ಮಂಕಾಳ ವೈದ್ಯ ಕೂಡಾ ಈ ಹಿಂದೆ ತಾವು ಶಾಸಕರಿದ್ದಾಗ ೨೦೧೫- ೧೬ರಲ್ಲಿ ಐಟಿಐ ಸ್ಥಾಪನೆಗೆ ₹೪ ಕೋಟಿ ಅನುದಾನ ಮಂಜೂರು ಮಾಡಿದ್ದು, ೨೦೧೭ರಲ್ಲಿ ಭೂಮಿಪೂಜೆ ನೆರವೇರಿಸಿ ೭ ವರ್ಷದ ಬಳಿಕ ಮತ್ತೆ ತಮ್ಮ ಅಧಿಕಾರದ ಅವಧಿಯಲ್ಲಿ ಕಾಲೇಜು ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಯಿತು ಎಂದು ಪೋಸ್ಟರ್ ಹಾಕಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ತಮ್ಮ ಅವಧಿಯಲ್ಲಿ ಹಣ ಮಂಜೂರಾಗಿತ್ತು ಎಂದು ಹಾಕಿರುವುದು ಜನರಲ್ಲಿ ಕುತೂಹಲದ ಜತೆಗೆ ಆಶ್ಚರ್ಯ ಉಂಟುಮಾಡುವಂತೆ ಆಗಿದೆ.ಅಂಕೋಲಾದಲ್ಲಿ ಜಿಎಸ್‌ಬಿ ಸಮಾಜ ದಿವಸ ಆಚರಣೆ
ಅಂಕೋಲಾ: ಶ್ರೀ ವೀರವಿಠ್ಠಲ ಯುವಕ ಮಂಡಳ ವತಿಯಿಂದ ಇಲ್ಲಿಯ ಮಠದ ಆವರಣದಲ್ಲಿ ಜಿಎಸ್‌ಬಿ ಸಮಾಜ ದಿವಸ ಸನ್ಮಾನ, ಪುರಸ್ಕಾರ, ವಿವಿಧ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳ ಮೂಲಕ ಸಂಭ್ರಮದಿಂದ ಜರುಗಿತು.ಪರ್ತಗಾಳಿ ಮಠ ಸ್ಥಾಪನೆಯ 550ನೇ ವರ್ಷಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಶ್ರೀರಾಮ ನಾಮ ಜಪ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಡುತ್ತಿರುವ ವೈದಿಕರಾದ ವಾಮನ ಭಟ್, ಆನಂದ ಭಟ್, ದತ್ತಾರಾಮ ಭಟ್, ಸುಧಾಮ ಭಟ್ ಅವರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು.ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಪ್ರಕಾಶ ಪ್ರಭಾಕರ ಕಾಮತ್ ಮಾತನಾಡಿ, ಜಿಎಸ್‌ಬಿ ಸಮಾಜವು ತನ್ನ ಬುದ್ಧಿಮತ್ತೆಯ ಕಾರಣದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಆಧುನಿಕ ಯುಗದಲ್ಲಿ ಸಂಸ್ಕಾರ, ಸಂಸ್ಕೃತಿ ಮರೆಯದಂತೆ ಮಕ್ಕಳನ್ನು ಬೆಳೆಸಬೇಕಾದ ಕರ್ತವ್ಯ ಹೆತ್ತವರ ಮೇಲಿದೆ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ವತಿಯಿಂದ ಮುಖ್ಯ ಅತಿಥಿ ಪ್ರಕಾಶ ಪ್ರಭಾಕರ ಕಾಮತ್ ಅವರನ್ನು ಸನ್ಮಾನಿಸಲಾಯಿತು.ಶ್ರೀ ವೀರವಿಠ್ಠಲ ಯುವಕ ಮಂಡಳ ಅಧ್ಯಕ್ಷ ಅನಮೋಲ ಮಂಜುನಾಥ ಪ್ರಭು ಸ್ವಾಗತಿಸಿದರು. ಉದಯ ಶೇಣ್ವಿ ಶ್ರೀರಾಮನಾಮ ಜಪಯಜ್ಞದ ವರದಿ ಓದಿದರು. ಸಂಘದ ವಾರ್ಷಿಕ ವರದಿ ಓದಿದ ಕಾರ್ಯದರ್ಶಿ ಸತೀಶ ಮಹಾಲೆ ಕಾರ್ಯಕ್ರಮ ನಿರ್ವಹಿಸಿದರು. ಮಠ ಕಮಿಟಿಯ ದಯಾನಂದ ಪ್ರಭು ಶೇಟಿಯಾ, ಯುವಕ ಮಂಡಳದ ವೆಂಕಟೇಶ ಕಾಮತ್, ಪ್ರಸಾದ ಮಹಾಲೆ, ನಾಗೇಂದ್ರ ಮಹಾಲೆ, ಉಲ್ಲಾಸ ಪ್ರಭು ವೇದಿಕೆಯಲ್ಲಿದ್ದರು. ನಂತರ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿತು.