ಆಶಾಕಿರಣ ಶಾಲಾ ಶಿಕ್ಷಕರಿಗೆ ವಸತಿ ಅನುದಾನಕ್ಕೆ ಸಚಿವ ಜಾರ್ಜ್ ಭರವಸೆ

| Published : Aug 17 2024, 12:54 AM IST

ಆಶಾಕಿರಣ ಶಾಲಾ ಶಿಕ್ಷಕರಿಗೆ ವಸತಿ ಅನುದಾನಕ್ಕೆ ಸಚಿವ ಜಾರ್ಜ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನ ಆಶಾಕಿರಣ ಅಂಧಮಕ್ಕಳ ಪಾಠಶಾಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಭೇಟಿ ನೀಡಿ ಮೆಸ್ಕಾಂ ಸಿಆರ್‌ಎಸ್ ಅನುದಾನದಲ್ಲಿ ಪೀಠೋಪಕರಣ, ಕಂಪ್ಯೂಟರ್, ಸೋಲಾರ್ ಸಾಮಗ್ರಿಗಳನ್ನು ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಇಲ್ಲಿನ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಅನುಕೂಲವಾಗುವಂತೆ ಸುಮಾರು 50 ಲಕ್ಷ ರು. ವೆಚ್ಚದಲ್ಲಿ 5 ಮನೆಗಳನ್ನು ನಿರ್ಮಿಸಲು ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಭರವಸೆ ನೀಡಿದರು.

ಆಶಾಕಿರಣ ಅಂಧಮಕ್ಕಳ ಪಾಠಶಾಲೆಗೆ ಭೇಟಿ ನೀಡಿ 11.20 ಲಕ್ಷ ರು. ವೆಚ್ಚದಲ್ಲಿ ಮೆಸ್ಕಾಂ ಸಿಆರ್‌ಎಸ್ ಅನುದಾನದಲ್ಲಿ ಪೀಠೋಪಕರಣ, ಕಂಪ್ಯೂಟರ್, ಸೋಲಾರ್ ಸಾಮಾಗ್ರಿಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.ತಮ್ಮ ಸ್ವಂತ ಹಣವನ್ನು ಒಂದು ಮನೆಗೆ ನೀಡುವುದಾಗಿ ಭರವಸೆ ನೀಡಿದ ಸಚಿವರು, ಉಳಿದ ನಾಲ್ಕು ಮನೆಗಳಿಗೆ ಮೆಸ್ಕಾಂನಿಂದ ಹಣ ನೀಡುವುದಾಗಿ ತಿಳಿಸಿದರು. ಮಕ್ಕಳಿಗೆ ಚಿಕ್ಕಿ, ಹಾಲು, ಮೊಟ್ಟೆ ಕೊಡುವಂತೆ ಶಾಲೆಯ ಸಂಸ್ಥಾಪಕ ಡಾ.ಜೆ.ಪಿ ಕೃಷ್ಣೇಗೌಡ ಅವರು ಮನವಿ ಮಾಡಿದ ಮೇರೆಗೆ ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದರು.

ಡಾ.ಜೆ.ಪಿ. ಕೃಷ್ಣೇಗೌಡ ಅವರ ಕೆಲಸ ರಾಜ್ಯಕ್ಕೇ ಮಾದರಿಯಾಗಿದ್ದು, ಇಂತಹವರು ಸಮಾಜ ಸೇವೆಗೆ ತೊಡಗಿಸಿಕೊಳ್ಳುವ ಮುಖಂಡರಿಗೆ ಬೆನ್ನೆಲುಬಾಗಿ ನಿಂತು ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು. ಈ ಶಾಲೆಗೆ ಭೇಟಿ ನೀಡಿರುವುದು ಸಂತಸ ತಂದಿದೆ. ಈ ಶಾಲೆಯ ಹೆಸರು ಕೇಳಿದ್ದೆ ಆದರೆ ನೋಡಿರಲಿಲ್ಲ, ಗೃಹ ಜ್ಯೋತಿ ಮಾದರಿಯಲ್ಲಿ ಅಂಧ ಮಕ್ಕಳ ಪಾಠಶಾಲೆಗೆ ಉಚಿತ ವಿದ್ಯುತ್ ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಯ ಸಂಸ್ಥಾಪಕ ಡಾ.ಜೆ.ಪಿ ಕೃಷ್ಣೇಗೌಡ ಮಾತನಾಡಿ, ಕಳೆದ 34 ವರ್ಷಗಳಿಂದ ಆಶಾಕಿರಣ ಅಂಧಮಕ್ಕಳ ಶಾಲೆ ನಡೆಸುತ್ತಿದ್ದು, ರಾಜ್ಯಾದ್ಯಂತ 6 ರಿಂದ 16 ವರ್ಷದ ಒಳಗಿನ ಅಂಧ ಮಕ್ಕಳಿಗೆ ಉಚಿತ ವಸತಿ, ಊಟೋಪಚಾರ, ಸಮವಸ್ತ್ರ ಹಾಗೂ ಔಷದೋಪಚಾರಗಳನ್ನು ನೀಡಿ, ಬ್ರೈಲ್ ಲಿಪಿಯಲ್ಲಿ ಶಿಕ್ಷಣ, ಸಂಗೀತ, ತಾಳವಾದ್ಯ, ಕಂಪ್ಯೂಟರ್, ಗುಡಿ ಕೈಗಾರಿಕೆಗಳ ಜೊತೆಗೆ ಆಟೋಟ ತರಬೇತಿಗಳನ್ನು ನಡೆಸಲಾಗುತ್ತಿದೆ ಎಂದರು.ದಕ್ಷಿಣ ಕರ್ನಾಟಕದಲ್ಲಿ ಅತ್ಯುತ್ತಮ ವ್ಯವಸ್ಥೆಗಳೊಂದಿಗೆ ಶಿಕ್ಷಣ ನೀಡುತ್ತಿರುವ ಈ ಶಾಲೆಗೆ ಇನ್ನಷ್ಟು ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು, ಶಾಲೆಯಲ್ಲಿ ಅಪೂರ್ಣವಾಗಿರುವ ರಿಟೈನಿಂಗ್ ವಾಲ್ ಹಾಗೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾಂಪೌಂಡ್‌ನ ಅವಶ್ಯಕತೆ ಎಂದು ಸಚಿವರಿಗೆ ಮನವಿ ಸಲ್ಲಿಸಿದರು.ಪ್ರಸ್ತುತ ಸರ್ಕಾರದಿಂದ ಮಕ್ಕಳ ನಿರ್ವಹಣ ವೆಚ್ಚಕ್ಕೆ ಒಂದು ಸಾವಿರ ರು. ಬಿಡುಗಡೆಯಾಗುತ್ತಿದ್ದು, ಇದನ್ನು ಮಾಸಿಕ ಎರಡು ಸಾವಿರ ರು.ಗಳಿಗೆ ಹೆಚ್ಚಿಸಬೇಕು. ಈ ವಿಶೇಷ ಶಾಲೆಗೆ ಪ್ರಸ್ತುತ ವಾರ್ಷಿಕ ವೆಚ್ಚ 10 ಸಾವಿರ ರು.ಗಳನ್ನು ನೀಡುತ್ತಿದ್ದು, ಗರಿಷ್ಟ 2 ಲಕ್ಷ ರು.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.ಜಿಲ್ಲೆಯ 33 ವಿಶೇಷ ಶಾಲೆಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾಸಿಕ ವಿದ್ಯುತ್ ಬಿಲ್‌ನ್ನು ಉಚಿತವಾಗಿ ನೀಡಬೇಕು, ಶಾಲೆಯ ದಿವ್ಯಾಂಗ ಮಕ್ಕಳಿಗಾಗಿಯೇ ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈ ಕಾರ್ಯಕ್ಕೆ ಸರ್ಕಾರದಿಂದ ಭೂಮಿ ಮಂಜೂರಾತಿ ನೀಡಿ ಆರ್ಥಿಕ ನೆರವನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್‌. ಕೀರ್ತನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ, ಹರ್ಷ ಅಭಿಷೇಕ್, ಗೌರಿ ವರುಣ್, ಡಾ.ಜ್ಯೋತಿ ಕೃಷ್ಣ, ಸಾಗರ್‌ ಹೆಗ್ಗಡೆ, ಹೆಚ್.ಸಿ. ಮಹೇಶ್, ಕೆ.ಮೋಹನ್ ಹಾಗೂ ಅಂಧ ಮಕ್ಕಳ ಪಾಠಶಾಲೆಯ ಟ್ರಸ್ಟಿಗಳು ಉಪಸ್ಥಿತರಿದ್ದರು.