ಸಾರಾಂಶ
ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ನಿವಾಸಕ್ಕೆ ಶುಕ್ರವಾರ ಆಗಮಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕುದುರೆ ಮೇಲೆ ಕರೆತಂದು ಕೈ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
ಶಿಗ್ಗಾಂವಿ: ತಾಲೂಕಿನ ಹುಲಗೂರು ಗ್ರಾಮದ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ನಿವಾಸಕ್ಕೆ ಶುಕ್ರವಾರ ಆಗಮಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಕುದುರೆ ಮೇಲೆ ಕರೆತಂದು ಕೈ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
ತಾಲೂಕಿನ ಹುಲಗೂರು ಗ್ರಾಮದಲ್ಲಿ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಹೆಸ್ಕಾಂ ಅಧ್ಯಕ್ಷರಾಗಿ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಆಗಮಿಸಿದ್ದ ಜಮೀರ್, ಅಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದ ಖಾದ್ರಿಯವರ ನಾಮಪತ್ರವನ್ನು ಹಿಂಪಡೆಯುವಂತೆ ಮನವೊಲಿಸಲು ಹುಲಗೂರಿಗೆ ಬಂದಾಗ ನೀವೆಲ್ಲ ಗೋ ಬ್ಯಾಕ್ ಜಮೀರ್ ಎಂದು ಪ್ರತಿಭಟನೆ ಮಾಡಿದ್ರಿ. ಆದರೆ ಈಗ ಕಮ್ ಬ್ಯಾಕ್ ಜಮೀರ್ ಎಂದು ನೀವೇ ನನ್ನನ್ನು ಕರೆದು ಕುದುರೆಯ ಮೇಲೆ ಭವ್ಯವಾಗಿ ಸ್ವಾಗತಿಸಿ ಸನ್ಮಾನಿಸುತ್ತಿದ್ದೀರಿ ಎಂದು ಹೇಳಿದರು.ಸಿಎಂ ಹಾಗೂ ಡಿಸಿಎಂ ಅವರು ಖಾದ್ರಿ ಅವರನ್ನು ಹೆಸ್ಕಾಂಗೆ ಚೇರ್ಮನ್ ಮಾಡಿದ್ದಾರೆ, ಖಾದ್ರಿಯವರ ಮೇಲೆ ನಿಮ್ಮ ಪ್ರೀತಿಯನ್ನು ಮರೆಯಲಾಗದು, ಅಂದು ಮುಸ್ಲಿಂ ಸಮುದಾಯದವರಿಗಿಂತ ಬೇರೆ ಬೇರೆ ಸಮುದಾಯದವರೇ ಹೆಚ್ಚಿದ್ದರು. ಖಾದ್ರಿಯವರು ಸರ್ವ ಸಮುದಾಯಗಳ ಮುಖಂಡರು ಎಂಬುದು ನಮಗೆ ಅಂದು ತಿಳಿಯಿತು ಎಂದರು.ನಂತರ ಹಜರೇಶಾ ಖಾದ್ರಿ ದರ್ಗಾಕ್ಕೆ ತೆರಳಿ ಮುಖಂಡರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಸತೀಶ ಜಾರಕಿಹೊಳಿ, ಸಚಿವ ರಹಿಂ ಖಾನ್, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ನಸೀರ ಅಹ್ಮದ, ಶಾಸಕ ಯಾಸೀರ್ ಖಾನ್ ಪಠಾಣ್, ಸೋಮಣ್ಣ ಬೇವಿನಮರದ ಸೇರಿದಂತೆ ಅನೇಕ ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು, ಸ್ಥಳೀಯ ಕಾಂಗ್ರೇಸ್ ಮುಖಂಡರು ಇದ್ದರು.