ಸಾರಾಂಶ
ಹೊಸಪೇಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲು ರಾಜ್ಯದ ಮಹಿಳೆಯರು, ಗರ್ಭಿಣಿಯರು, ಬಾಣಂತಿಯರ ಬಗ್ಗೆ ಕಾಳಜಿ ವಹಿಸಲಿ. ಅಂಗನವಾಡಿ ಕೇಂದ್ರಗಳ ಸಮಸ್ಯೆ ಬಗೆಹರಿಸಲಿ. ಅವರು ಇನ್ನೂ ಗೃಹಲಕ್ಷ್ಮಿ ಗುಂಗಲ್ಲಿದ್ದಾರೆ. ವರ್ಗಾವಣೆ, ಪ್ರಮೋಷನ್ ಕೆಲಸದಲ್ಲಿ ತೊಡಗಿದ್ದಾರೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ (ಸಿಐಟಿಯು) ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ದೂರಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳ ಕೆಲಸಗಳು ಆಗುತ್ತಿಲ್ಲ. ರಾಜ್ಯದಲ್ಲಿ ಮಹಿಳೆಯರು, ಗರ್ಭಿಣಿಯರು, ಬಾಣಂತಿಯರಿದ್ದಾರೆ ಅವರ ಬಗ್ಗೆ ಕಾಳಜಿ ವಹಿಸಬೇಕು. ಅಂಗನವಾಡಿಗಳ ಸಮಸ್ಯೆ, ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಸಚಿವರು ಗಮನಹರಿಸಲಿ ಎಂದರು.ಶ್ರೀರಾಮ ನಮಗೂ ದೇವರು. ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ನಾವು ಪೂಜೆ ಮಾಡುತ್ತೇವೆ. ನಾವು ಕೂಡ ಶ್ರೀರಾಮನ ಭಕ್ತರು. ರಾಮಮಂದಿರ ಲೋಕಾರ್ಪಣೆ ವಿಚಾರವನ್ನು ಲೋಕಸಭೆ ಚುನಾವಣೆಗೆ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದರು.
ಸಂಸದರ ಮನೆ ಎದುರು ಧರಣಿ:ರಾಜ್ಯದ ಅಂಗನವಾಡಿ ನೌಕರರ ಹಾಗೂ ಕಾರ್ಮಿಕರ ವಿವಿಧ ಸಮಸ್ಯೆಗಳ ಕುರಿತು ರಾಜ್ಯಾದ್ಯಂತ ಸಂಸದರ ಮನೆಗಳ ಎದುರು ಜ. 23ರಿಂದ 25 ರವರೆಗೆ ಧರಣಿ ನಡೆಸಲಾಗುವುದು. ಅಂಗನವಾಡಿ ನೌಕರರ ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಬೇಕು. ರಾಜ್ಯದ ದುಡಿಯುವ ಜನರ ಮೇಲೆ ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ನೀತಿಗಳು ಜೀವನ ಸಮಸ್ಯೆಗಳನ್ನು ರಾಜಕೀಯ ಪ್ರಶ್ನೆಯಾಗಿ ಬದಲಾಯಿಸಿವೆ. ಹೀಗಾಗಿ ಕಳೆದ ಒಂಬತ್ತು ವರ್ಷಗಳಿಂದ ಬಿಜೆಪಿ ನೇತೃತ್ವದ ಕಾರ್ಮಿಕ ವಿರೋಧಿ ನೀತಿಗಳು ಕೋಟ್ಯಂತರ ಜನರ ದೈನಂದಿನ ಬದುಕಿನ ಮೇಲೆ ದುಷ್ಪರಿಣಾಮ ಬೀರಿವೆ ಎಂದರು.
ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದ್ದರೂ ರಾಜ್ಯಕ್ಕೆ ಜಿಎಸ್‌ಟಿಯಲ್ಲಿ ದೊರಕಬೇಕಾದ ನ್ಯಾಯಯುತ ಪಾಲನ್ನು ಕೇಂದ್ರ ಸರ್ಕಾರ ಕೊಡಲು ನಿರಂತರವಾಗಿ ನಿರಾಕರಿಸುತ್ತಿದೆ. ರಾಜ್ಯದ ಪಾಲನ್ನು ವೈಜ್ಞಾನಿಕವಾಗಿ ಹೆಚ್ಚಿಸಲು ಕೇಂದ್ರ ಸರ್ಕಾರ ನಿರಾಕರಿಸುತ್ತಿರುವುದನ್ನು ಹಾಗೂ ರಾಜ್ಯ ಸರ್ಕಾರದ ಮನವಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸುತ್ತಿರುವುದನ್ನು ರಾಜ್ಯದ ಸಂಸದರು ಪ್ರಶ್ನಿಸುತ್ತಿಲ್ಲ.ಕೇಂದ್ರದ ಬಿಜೆಪಿ ಸರ್ಕಾರ ಹೇರುವ ಕಾರ್ಪೋರೇಟ್ ಬಂಡವಾಳಿಗರ ಪರವಾದ ಆರ್ಥಿಕ ನಿಬಂಧನೆಗಳನ್ನು ವಿರೋಧಿಸುವ ಇಚ್ಛಾಶಕ್ತಿಯು ರಾಜ್ಯಸರ್ಕಾರಕ್ಕೆ ಇಲ್ಲ.
ಕಳೆದ ಬಿಜೆಪಿ ಸರ್ಕಾರವು ಜಾರಿ ಮಾಡಿದ ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ಹಾಗೂ ಸುಗ್ರಿವಾಜ್ಞೆಗಳನ್ನು ಹಿಂದಕ್ಕೆ ಪಡೆಯುವ ಬದಲು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗುತ್ತಿದೆ. ಕೆಲಸದ ಅವಧಿಯ ವಿಸ್ತರಣೆ ಕನಿಷ್ಠ ವೇತನ ಪರಾಮರ್ಶೆ, ಕೈಗಾರಿಕಾ ಕಾಯಿದೆಗಳಲ್ಲಿನ ತಿದ್ದುಪಡಿಗಳು ಮುಂತಾದ ಕಾರ್ಮಿಕ ವಿರೋಧಿ ಕ್ರಮಗಳನ್ನು ಹಿಂಪಡೆಯುವ ಯಾವುದೇ ಆಸಕ್ತಿಗಳನ್ನು ರಾಜ್ಯ ಸರ್ಕಾರವೂ ತೋರುತ್ತಿಲ್ಲ ಎಂದು ದೂರಿದರು.ಮುಖಂಡರಾದ ಭಾಸ್ಕರ್ ರೆಡ್ಡಿ, ಕೆ. ನಾಗರತ್ನ, ಸ್ವಪ್ನಾ ಮತ್ತಿತರರಿದ್ದರು.