ಸಚಿವ ಆರ್‌.ಬಿ. ತಿಮ್ಮಾಪೂರಗೆ ಡಿಸಿಎಂ ಹುದ್ದೆ ನೀಡುವಂತೆ ಆಗ್ರಹ

| Published : Jan 13 2024, 01:31 AM IST

ಸಚಿವ ಆರ್‌.ಬಿ. ತಿಮ್ಮಾಪೂರಗೆ ಡಿಸಿಎಂ ಹುದ್ದೆ ನೀಡುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಆರ್‌.ಬಿ.ತಿಮ್ಮಾಪೂರಗೆ ಡಿಸಿಎಂ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂದು ಮಾದಿಗ ಸಮಾಜದ ಮುಖಂಡರ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಚಿವರಾದ ಆರ್.ಬಿ. ತಿಮ್ಮಾಪೂರ ಉತ್ತರ ಕರ್ನಾಟಕದ ದಲಿತ ಸಮುದಾಯದ (ಎಡಗೈ) ಪ್ರಬಲ ನಾಯಕರಾಗಿದ್ದು, ಮಾದಿಗ ಸಮುದಾಯವನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಸಮುದಾಯ ಬೆಂಬಲ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮುದಾಯದ ಆಶಯದಂತೆ ಅವರಿಗೆ ಉಪಮಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂದು ಮಾದಿಗ ಸಮಾಜದ ಮುಖಂಡರು ಆಗ್ರಹಿಸಿದರು.

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಸಮಾಜದ ಮುಖಂಡ ಪೀರಪ್ಪ ಮ್ಯಾಗೇರಿ, ಇಂದಿರಾಗಾಂಧಿ ಹಾಗೂ ದೇವರಾಜ ಅರಸು ಕಾಲದಿಂದಲೂ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಒದಗಿಸುತ್ತಾ ಬಂದಿದೆ, ಈಗಿನ ಸರ್ಕಾರ, ಪಕ್ಷದ ಹೈಕಮಾಂಡ್, ಮಾದಿಗರ ಅಸ್ಮಿತೆಗೆ ಧಕ್ಕೆ ಆಗದಂತೆ ಸಾಮಾಜಿಕ ಸ್ಥಾನಮಾನ ನೀಡಬೇಕೆಂದು ಹೇಳಿದರು.

ಎಡಗೈ ಸಮುದಾಯದ ನಾಯಕರಾದ ತಿಮ್ಮಾಪೂರ ಹಾಗೂ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್‌ ಪಕ್ಷ ಸಂಘಟನೆಗೆ ದುಡಿದಿದ್ದು, ಸಮುದಾಯ ಅವರಿಗೆ ಬೆಂಬಲವಾಗಿ ನಿಲ್ಲಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸಮಾಜದ ಬೆಂಬಲ ಪಡೆಯಬೇಕಾದರೆ ಸಚಿವರಾದ ಆರ್.ಬಿ. ತಿಮ್ಮಾಪೂರಗೆ ಡಿ.ಸಿ.ಎಂ. ಹುದ್ದೆ ನೀಡಬೇಕೆಂದು ಒತ್ತಾಯಿಸಿದರು.

ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಸಮಾಜದ ಕುರಿತು ಕಾಂಗ್ರೇಸ್ ಪಕ್ಷದ ಬಗ್ಗೆ ಅನೇಕ ಉಹಾಪೂಹಗಳು ಎದ್ದಿದ್ದು, ಎಲ್ಲದ್ದಕ್ಕೂ ತೆರೆ ಎಳೆದು ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜವನ್ನು ಸಂಘಟಿಸಿ ಪಕ್ಷಕ್ಕೆ ಶಕ್ತಿ ನೀಡಿದ ವ್ಯಕ್ತಿ ಆರ್.ಬಿ. ತಿಮ್ಮಾಪೂರ ರಾಜ್ಯಾದ್ಯಂತ ಸಮುದಾಯ ಹಾಗೂ ಸರ್ವಜನಾಂಗವನ್ನು ಒಟ್ಟಿಗೆ ಕರೆದೊಯ್ಯುತ್ತಾರೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕಷ್ಟ ಕಾರ್ಪಣ್ಯಗಳಲ್ಲಿ ಅವರು ಭಾಗಿಯಾಗುತ್ತಾರೆ. ಪಕ್ಷದ ವರಿಷ್ಠರು ಸಾಮಾಜಿಕ ನ್ಯಾಯ ನೀಡದಿದ್ದರೆ ಅದಕ್ಕೆ ಬದ್ಧತೆ ಇಲ್ಲದಂತಾಗುತ್ತದೆ ಎಂದು ಪೀರಪ್ಪ ಮ್ಯಾಗೇರಿ ಹೇಳಿದರು.

ಸಿಎಮ್ ಗೆ ಮನವಿ

ನಾಳೆ ಬಾಗಲಕೋಟೆ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಮ್ಮಾಪೂರಗೆ ಡಿ.ಸಿ.ಎಂ. ಮಾಡಲು ಮನವಿ ಕೊಡಲಾಗುವುದು ಹಾಗೂ ಹೈಕಮಾಂಡ್‌ ಗೂ ರಾಜ್ಯದ ಮಾದಿಗರೆಲ್ಲರೂ ಸೇರಿ ಮನವಿ ಕೊಡಲು ನಿರ್ಧರಿಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿವಾನಂದ ಮಾದರ, ನಾಗೇಶ ಸಿದ್ಧನ್ನವರ, ದಶರಥ ಚಿಕ್ಕಸಂಶಿ, (ವಕೀಲರು) ಬಾಬು ಮುರನಾಳ, ಮಂಜುನಾಥ ಮಾದರ, ರಂಗನಾಥ ಸನಾದಿ, ವಿರೂಪಾಕ್ಷ ಆಡಗಲ್, ಮುತ್ತು ಛಬ್ಬಿ, ರಮೇಶ ಮಾದರ, ತೊಟ್ಲಪ್ಪ ಸೋರಕೊಪ್ಪ, ಮುದಕಪ್ಪ ಶೆಲ್ಲಿಕೇರಿ, ಪರಶುರಾಮ ಕುಂದರಗಿ, ರಂಗಪ್ಪ ದೊಡಮನಿ, ಸಾರಪ್ಪ ಮಾದರ, ಮಲ್ಲು ಬೆನಕಟ್ಟಿ, ಈರಪ್ಪ ಮಾದರ, ಅರ್ಜುನ ಯಂಕಂಚಿ, ಉಪಸ್ಥಿತರಿದ್ದರು.