ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಕುಡಿಯುವ ನೀರು, ಪರೀಕ್ಷಾ ಫಲಿತಾಂಶ ಹಾಗೂ ರೈತರ ವಿಚಾರದಲ್ಲಿ ಯಾವ ಸಬೂಬು ಕೇಳುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಸಚಿವ ಡಿ.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ತ್ರೈಮಾಸಿಕ ಸಭೆ ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿಯವರು ಮಾಹಿತಿ ನೀಡಿ, ಈಗಾಗಲೇ ಶೇ.90ರಷ್ಟು ಪುಸ್ತಕ ಸರಬರಾಜು ಮಾಡಲಾಗಿದೆ. ಇದೀಗ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು 20257 ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಬರಾಜು ಆಗಿವೆ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.74ರಷ್ಟು ಫಲಿತಾಂಶ ಬಂದಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಟ್ಟ ಮಾಹಿತಿ ಆಲಿಸಿ ಮಾತನಾಡಿದ ಸಚಿವರು, ತಾಲೂಕಿನ ಪರೀಕ್ಷಾ ಫಲಿತಾಂಶ ಕಳೆದ ವರ್ಷ ಒಂದನೇ ಸ್ಥಾನದಲ್ಲಿದ್ದು ಈ ವರ್ಷ 21ನೇ ಸ್ಥಾನಕ್ಕೆ ಕುಸಿದಿದೆ. ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಓದುತ್ತಿದ್ದು ಬಿಇಓ ಶಾಲೆಗಳಿಗೆ ಭೇಟಿ ನೀಡುತ್ತಾ ಅಲ್ಲಿನ ವಿದ್ಯಾಭ್ಯಾಸದ ಗುಣಮಟ್ಟ ಸುಧಾರಿಸಲು ಪ್ರಯತ್ನಿಸುತ್ತಿರಬೇಕು. ಗ್ರೇಸ್ ಮಾರ್ಕ್ಸ್ ನಿಲ್ಲಿಸುವ ನಿರ್ಧಾರವಾಗಿದ್ದು ಬರುವ ವರ್ಷ ಉತ್ತಮ ಫಲಿತಾಂಶ ತಂದುಕೊಡುವ ಜವಾಬ್ದಾರಿ ನಿಮ್ಮದು. ತಾಲೂಕಿನ ಎಲ್ಲೆಲ್ಲಿ ಶಾಲಾ ಕಟ್ಟಡಗಳ ರಿಪೇರಿ ಮತ್ತು ಹೊಸ ಕಟ್ಟಡಗಳ ಅನಿವಾರ್ಯತೆ ಇದೆಯೋ ಅವುಗಳ ಪಟ್ಟಿ ಮಾಡಿಕೊಡಿ ಎಂದರು.
ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಸುಮಾರು 67 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿವ ನೀರು ಸಾಗಿಸಲಾಗುತ್ತಿತ್ತು. ಇದೀಗ ಕೇವಲ 6 ಹಳ್ಳಿಗಳಲ್ಲಿ ಮಾತ್ರ ಕುಡಿವ ನೀರಿನ ಅಭಾವವಿದೆ. ಇಡೀ ರಾಜ್ಯದಲ್ಲಿ ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು 6000 ಟ್ಯಾoಕರ್ ನೀರು ಸರಬರಾಜು ಮಾಡಲಾಗಿದೆ ಎಂದರು.ಕುಡಿವ ನೀರಿನ ಮಾಹಿತಿಗೆ ಉತ್ತರಿಸಿ ಕಟ್ಟುನಿಟ್ಟಾಗಿ ಆದೇಶಿಸಿದ ಸಚಿವರು ಈ ತಿಂಗಳ ಒಳಗೆ ಎಲ್ಲಾ ಆರ್‌ಒ ಪ್ಲಾಂಟ್‌ಗಳು ರಿಪೇರಿಯಾಗಬೇಕು. ಜುಲೈ ಅಂತ್ಯದೊಳಗೆ ಜೆಜೆ ಹಳ್ಳಿಯ ಜೆಜೆಎಂ ಯೋಜನೆಯ ಟ್ರಯಲ್ ರನ್ ಆಗಬೇಕು ಎಂದರು. ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ ಈ ಬಾರಿ 208 ಮಿಮೀಟರ್ ಮಳೆಯಾಗಿದೆ. ಶೇ 41 ರಷ್ಟು ಹೆಚ್ಚಿನ ಮಳೆಯಾಗಿದೆ. ಇಲ್ಲಿಯವರೆಗೆ ಶೇ 10 ರಷ್ಟು ಬಿತ್ತನೆಯಗಿದ್ದು ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಬೀಜಗಳ ದಾಸ್ತಾನು ಇದ್ದು ಬೀಜಗಳ ಕೊರತೆ ಇಲ್ಲ ಎಂದರು.
ಪಶು ಪಾಲನೆ ಮತ್ತು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಮೊಹಮ್ಮದ್ ಹುಸೇನ್ ಅಧಿಕಾರಿ ಸಭೆಗೆ ಮಾಹಿತಿ ನೀಡಿ 9 ವೈದ್ಯರ ಹುದ್ದೆ ಖಾಲಿ ಇದ್ದು ಇಬ್ಬರು ವೈದ್ಯರು ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಈಗಾಗಲೇ ವ್ಯಾಕ್ಸಿನ್ ಸಂಗ್ರಹವಿದ್ದು ಯಾವುದೇ ತೊಂದರೆಯಿಲ್ಲ ಎಂದರು. ಅವರ ಮಾಹಿತಿ ಆಲಿಸಿ ಸಚಿವರು ಮಾತನಾಡಿ, ವೆಟರ್ನರಿ ಡಿಪ್ಲೊಮಾ ಕಾಲೇಜನ್ನು ತಾಲೂಕಿಗೆ ತರುವ ಇಂಗಿತ ವ್ಯಕ್ತಪಡಿಸಿದರು.ಸಿಡಿಪಿಓ ರಾಘವೇಂದ್ರ ಮಾತನಾಡಿ, ಅಂಗನವಾಡಿ ಕಟ್ಟಡಗಳ ಕೊರತೆಯಿದ್ದು ನಗರ ಭಾಗದಲ್ಲಿಯೇ ಸುಮಾರು 40ಕ್ಕೂ ಹೆಚ್ಚು ಕಟ್ಟಡಗಳ ಅವಶ್ಯಕತೆ ಇದ್ದು ಜಾಗ ಹುಡುಕಲು ಈಗಾಗಲೇ ನಗರಸಭೆಗೆ ಮನವಿ ಸಲ್ಲಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನಿರ್ದೇಶನ ನೀಡಿದ ಸಚಿವರು ಹಾಸ್ಟೆಲ್ ಮಕ್ಕಳ ರಿಸಲ್ಟ್ ಕಡಿಮೆಯಾದರೆ ನೀವೇ ಜವಾಬ್ದಾರರಾಗುತ್ತೀರಿ. 23 ಹಾಸ್ಟೆಲ್ ಗಳಲ್ಲಿಯೂ ಸ್ವಚ್ಛತೆಗೆ, ಶುದ್ಧ ಕುಡಿಯುವ ನೀರಿಗೆ ಮತ್ತು ಗುಣಮಟ್ಟದ ಊಟಕ್ಕೆ ಆದ್ಯತೆ ನೀಡಬೇಕು ಎಂದು ಎಚ್ಚರಿರಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿಟಿ ಶ್ರೀನಿವಾಸ್, ತಹಸೀಲ್ದಾರ್ ರಾಜೇಶ್ ಕುಮಾರ್, ಇಓ ಸತೀಶ್ ಕುಮಾರ್, ಕೆಡಿಪಿ ಸದಸ್ಯರುಗಳಾದ ಶಿವಕುಮಾರ್, ಗುರುಪ್ರಸಾದ್, ಶ್ರೀಧರ್, ಅಯೂಬ್ ಖಾನ್, ಮಹಾಂತೇಶ್, ಮಮತಾ ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.