ಸಚಿವರಿಗೆ ಜಿಲ್ಲೆ ಮತ್ತು ಕ್ಷೇತ್ರದ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಶರಾವತಿ ಪಂಪ್ಡ್‌ ಸ್ಟೋರೇಜ್ ಹೋರಾಟದಲ್ಲಿ ನಮ್ಮ ಜತೆ ಪಾಲ್ಗೊಂಡು ಯೋಜನೆ ಬಗ್ಗೆ ವಿರೋಧ ಮಾಡಲಿ.

ಕನ್ನಡಪ್ರಭ ವಾರ್ತೆ ಭಟ್ಕಳ

ಕಾರವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಹೇಳಿಕೆ ನೀಡುವ ಸಂದರ್ಭ ಮಾತನಾಡದೇ ಸುಮ್ಮನೇ ಕುಳಿತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಇದೀಗ ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಚಿವರಿಗೆ ಜಿಲ್ಲೆ ಮತ್ತು ಕ್ಷೇತ್ರದ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಶರಾವತಿ ಪಂಪ್ಡ್‌ ಸ್ಟೋರೇಜ್ ಹೋರಾಟದಲ್ಲಿ ನಮ್ಮ ಜತೆ ಪಾಲ್ಗೊಂಡು ಯೋಜನೆ ಬಗ್ಗೆ ವಿರೋಧ ಮಾಡಲಿ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರ ಬಹುಬೇಡಿಕೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಜಾಗ ಮಂಜೂರಿಸಲು ಸಾಧ್ಯವಾಗಿಲ್ಲ. ಚುನಾವಣೆ ಸಂದರ್ಭ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸರಕಾರ ಮಾಡದಿದ್ದರೆ ತಾನೇ ಮಾಡುತ್ತೇನೆಂದು ಹೇಳಿದ್ದಾರೆ. ಇದೀಗ ಆಸ್ಪತ್ರೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಆರೋಪಿಸಿದ ಅವರು, ಜಿಲ್ಲೆಯ ಜನರಿಗೆ ಸಚಿವರು ಉಪಕಾರ ಮಾಡಬೇಕೇ ಹೊರತು, ಮೋಸ ಮಾಡಬಾರದು. ಜನರ ಋಣ ತೀರಿಸುವ ಕೆಲಸ ಮಾಡಬೇಕು. ಸಚಿವರಿಂದ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದ ಟೀಕಿಸಿದರು.

ಮಾಜಿ ಸಚಿವ ಶಿವಾನಂದ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿದರು. ಪಶ್ವಿಮಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಭಟ್ಕಳ, ಪ್ರಮುಖರಾದ ಮಂಜುನಾಥ ನಾಯ್ಕ ಮಂಕಿ, ಗಣಪತಿ ಗೌಡ, ರಾಜೇಶ ನಾಯ್ಕ, ರವಿ ನಾಯ್ಕ, ಭಾಸ್ಕರ ದೈಮನೆ, ಶ್ರೀನಿವಾಸ ನಾಯ್ಕ ಮುಂತಾದವರಿದ್ದರು.