ಬಾಣಂತಿಯರ ಸಾವಾದರೂ ಸಚಿವ ಜಮೀರ್ ಭೇಟಿ ನೀಡಿಲ್ಲ, ಅವನು ಬದುಕಿದ್ದಾನೋ, ಸತ್ತಿದ್ದಾನೋ ಗೊತ್ತಿಲ್ಲ: ರಾಮುಲು ಆರೋಪ

| Published : Feb 04 2025, 12:31 AM IST

ಬಾಣಂತಿಯರ ಸಾವಾದರೂ ಸಚಿವ ಜಮೀರ್ ಭೇಟಿ ನೀಡಿಲ್ಲ, ಅವನು ಬದುಕಿದ್ದಾನೋ, ಸತ್ತಿದ್ದಾನೋ ಗೊತ್ತಿಲ್ಲ: ರಾಮುಲು ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

7-8 ಬಾಣಂತಿಯರ ಸಾವಾದರೂ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿಲ್ಲ.

ಕಂಪ್ಲಿ: 7-8 ಬಾಣಂತಿಯರ ಸಾವಾದರೂ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿಲ್ಲ. ಅವನು ಸತ್ತಿದ್ದಾನೋ ಬದುಕಿದ್ದಾನೋ ಗೊತ್ತಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಏಕವಚನದಲ್ಲಿ ಗದಾಪ್ರಹಾರ ನಡೆಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ನೂತನ ಬಿಜೆಪಿ ಮಂಡಲಗಳ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಬಾಣಂತಿಯರು ತೆರಳಿದರೆ ಜೀವಂತವಾಗಿ ವಾಪಸ್ ಬರುತ್ತಾರೆ ಎನ್ನುವ ನಂಬಿಕೆ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿಯಿಂದ ಹಿಡಿದು ಎಲ್ಲ ವಿಷಯವು ಕೊಲ್ಯಾಪ್ಸ್ ಆಗಿದೆ. ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಈಗ ನಡೆಯುತ್ತಿರುವ ಕಾಮಗಾರಿಗಳೆಲ್ಲ ಅಂದಿನ ಬಿಜೆಪಿ ಸರ್ಕಾರ ಬಿಡುಗಡೆಗೊಳಿಸಿದ್ದ ಅನುದಾನದಲ್ಲಿ ನಡೆಯುತ್ತಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸಿದ್ದೇವೆ. ರೈತರು ಬೆಳೆದ ಬೆಳೆಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿಲ್ಲ. ಸರಿಯಾದ ಸಮಯದಲ್ಲಿ ಖರೀದಿ ಕೇಂದ್ರ ತೆರೆಯದೇ ರೈತರೆಲ್ಲ ತಮ್ಮ ಬೆಳೆಗಳನ್ನು ಮಾರಿದ ಬಳಿಕ ತೆರೆಯುತ್ತಿದ್ದಾರೆ. ಕಾಂಗ್ರೆಸ್ ಗೆ ರೈತರ ಬಗ್ಗೆ ಕಾಳಜಿ ಇಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಇನ್ನು ಶಾಸಕ ಗಣೇಶ್ ಕಂಪ್ಲಿ ಪುರಸಭೆ ಬಿಜೆಪಿ ಸದಸ್ಯರನ್ನು ವಾಮಮಾರ್ಗದ ಮೂಲಕ ತಮ್ಮ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಧಮ್ ಇದ್ದರೆ ಜನರ ಮಧ್ಯೆ ಗೆದ್ದು ತೋರಿಸಬೇಕು. ಕಾಂಗ್ರೆಸ್ ನ್ನು ತೊಲಗಿಸಬೇಕೆಂದರೆ ತಾವೆಲ್ಲರೂ ಒಂದಾಗಿ ಪಕ್ಷ ಸಂಘಟನೆಯಲ್ಲಿ ತಲ್ಲೀನರಾಗಬೇಕು ಎಂದರು.

ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ರಾಮುಲು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಕಂಪ್ಲಿ ಉತ್ಸವ ಮಾಡಿದ್ದರು. ಕಂಪ್ಲಿ ಉತ್ಸವವನ್ನೇ ಮಾಡಲು ಮುಂದಾಗದ ಶಾಸಕ ಗಣೇಶ ಇನ್ನು ಕುರುಗೋಡು ಉತ್ಸವ ಮಾಡುತ್ತೇನೆ ಅನ್ನುವುದು ಎಲ್ಲಿಯ ಮಾತು? ಕಾಂಗ್ರೆಸ್ ನವರು ಗ್ಯಾರಂಟಿ ತಂದು ಮೋಸ ಮಾಡಿ ಜನರಿಂದ ವೋಟ್ ಪಡೆದಿದ್ದಾರೆ ಎಂದರು.

ಬಿಜೆಪಿ ಅವಧಿಯಲ್ಲಿ ರಾಮುಲು ತಂದ ಅನುದಾನವನ್ನು ತಾನು ತಂದಿದ್ದೇನೆ ಎಂದು ಶಾಸಕರು ಬೀಗುತ್ತಿದ್ದರು. ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡಿ ಬಿಡುಗಡೆಗೊಳಿಸಿತ್ತು. ಆದರೆ ಈವರೆಗೂ ಅದರ ಭೂಮಿ ಪೂಜೆ ಆಗಿಲ್ಲ. ತಮ್ಮ ಸರ್ಕಾರದ ಅವಧಿಯಲ್ಲಿ ಗಣೇಶ್ ಕ್ಷೇತ್ರದ ಜನತೆಗೆ ನೀಡಿದ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.

ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ. ಮಹಾದೇವ, ಕುರುಗೋಡು ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ರಾಮುಲು ಪಕ್ಷದ ಬಾವುಟ ನೀಡಿ ಶುಭ ಕೋರಿದರು.

ವಿಪ ಸದಸ್ಯ ವೈ.ಎಂ. ಸತೀಶ್, ಮುಖಂಡರಾದ ಪಿ.ಬ್ರಹ್ಮಯ್ಯ, ಎರಂಗಳಿ ತಿಮ್ಮಾರೆಡ್ಡಿ, ಮುರುಳಿ ಮೋಹನರೆಡ್ಡಿ ಸೇರಿ ಪುರಸಭೆ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರಿದ್ದರು.