ಆದಿಕರ್ನಾಟಕ ಅಭಿವೃದ್ಧಿ ಸಂಘದಿಂದ ₹1.92 ಕೋಟಿಗೂ ಹೆಚ್ಚು ಅವ್ಯವಹಾರ

| Published : Jan 25 2025, 01:01 AM IST

ಆದಿಕರ್ನಾಟಕ ಅಭಿವೃದ್ಧಿ ಸಂಘದಿಂದ ₹1.92 ಕೋಟಿಗೂ ಹೆಚ್ಚು ಅವ್ಯವಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಆದಿಕರ್ನಾಟಕ ಅಭಿವೃದ್ದಿ ಸಂಘದ ಅಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದಿಂದ ಕಳೆದ ಹಲವಾರು ವರ್ಷಗಳಿಂದ ಮಾಡಿರುವ ಅಕ್ರಮಗಳ ಕುರಿತು ಅದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ನೀಡಿದ್ದ ದೂರಿನನ್ವಯ ಸಹಕಾರ ಸಂಘಗಳ ಜಂಟಿ ನಿರ್ದೇಶಕರ ಸೂಚನೆ ಮೇರೆಗೆ ಜಿಲ್ಲಾ ಸಹಕಾರ ಸಂಘಗಳ ಉವನಿಬಂಧಕರು ನಡೆಸಿದ 25ರ ತನಿಖೆಯಲ್ಲಿ ₹1,92,56,026 ದುರುಪಯೋಗವಾಗಿರುವುದು ಕಂಡು ಬಂದಿದ್ದು, ಇದರನ್ವಯ ಕೂಡಲೇ ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕು ಎಂದು ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಯ್ಯನಪುರ ಶಿವಕುಮಾರ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಸತತವಾಗಿ ನಮ್ಮ ಸಮಿತಿ ಹೋರಾಟ ಮಾಡಿದ ಫಲವಾಗಿ ಇಂದು ಸತ್ಯಕ್ಕೆ ಜಯವಾಗಿದೆ ಎಂದರು. ಸರ್ಕಾರವೇ ನೇಮಕ ಮಾಡಿದ್ದ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮತ್ತು ಸಹಾಯಕರ ನಿಬಂಧಕರನ್ನೊಳಗೊಂಡ ಸಮಿತಿಯು 25ರನ್ವಯ ವಿಚಾರಣೆ ಮಾಡಿ, ಎಲ್ಲ ಆಯಮಗಳಲ್ಲಿ ತನಿಖೆ ಮಾಡಿ, ಅಂತಿಮವಾಗಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಮತ್ತು ಅಡಳಿತ ಮಂಡಳಿಯವರು ಸಂಘದ ಹಣಕಾಸು ನಿರ್ವಹಿಸುವಲ್ಲಿ ವಿಫಲರಾಗಿದ್ದು, 1,92,56,026 ರು.ಗಳಿಗೆ ಸರಿಯಾದ ಲೆಕ್ಕ ಪತ್ರಗಳು ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಮತ್ತು ನಗದು ಪುಸ್ತಕಗಳಿಗೆ ನಮೂದಿಸಿಲ್ಲ. ಅಲ್ಲದೇ ಸಂಘ ಆದಾಯ ಸೋರಿಕೆ ಹಾಗು ಅಕ್ರಮ ನಡೆದಿರುವುದು ಮೇಲ್ನೂಟಕ್ಕೆ ಕಂಡು ಬಂದಿದೆ. ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಸಲ್ಲಿಸಿರುವ ವಿಚಾರಣಾ ವರದಿಯಲ್ಲಿ ಬಹಿರಂಗಗೊಂಡಿದೆ ಎಂದರು.

ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಲಿಯು ಸಂಘದ ಬೈಲಾ ಅನ್ವಯ ಕಾರ್ಯಯೋಜನೆಗಳನ್ನು ರೂಪಿಸಲ್ಲ. ಅಲ್ಲದೇ ಕಾಲ ಕಾಲಕ್ಕೆ ಲೆಕ್ಕ ಪರಿಶೀಲನೆ, ಆಡಿಟ್ ವರದಿ, ಲೆಕ್ಕ ಪರಿಶೋಧನೆ, ಮಾಸಿಕ ಸಭೆ, ವಾರ್ಷಿಕ ಸಭೆಗಳನ್ನು ನಡೆಸದೇ ಏಕಪಕ್ಷೀಯವಾಗಿ ನಡೆದುಕೊಂಡಿದ್ದು ಸಂಘದ ಆಸ್ತಿಯನ್ನು ಸಂರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಂಘದ ಆಸ್ತಿಯನ್ನು ತಮ್ಮ ಸ್ವಂತಕ್ಕೆ ಸೇರಿದಂತೆ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಸಂಘಕ್ಕೆ ವಾಣಿಜ್ಯ ಕಟ್ಟಡದಿಂದ ಬರುತ್ತಿದ್ದ ಬಾಡಿಗೆ, ಜಮೀನುಗಳಿಂದ ಆಸ್ತಿಗಳಿಂದ ಬಂದ ಆದಾಯ, ಸಂಘದ ಹಾಸ್ಟೆಲ್‌ಗೆ ಬರುತ್ತಿದ್ದ ಆದಾಯವನ್ನು ಲೆಕ್ಕಪತ್ರಕ್ಕೆ ಸರಿಯಾಗಿ ಜಮಾ ಮಾಡಿಲ್ಲ. ಜೊತೆಗೆ ಸಂಘಕ್ಕೆ ಬಂದ ಆದಾಯವನ್ನು ಖರ್ಚು ಮಾಡುವಲ್ಲಿ ಸಂಘದ ಸದಸ್ಯರು ಹಾಗೂ ಆಡಳಿತ ಮಂಡಲಿಯ ಅನುಮೋದನೆ ಪಡೆದುಕೊಂಡಿರುವುದು ಇಲ್ಲ. ಅಲ್ಲದೇ ಸಂಘದ ಸದಸ್ಯತ್ವ ಪಡೆಯುವಲ್ಲಿ ಅವ್ಯವಹಾರ ನಡೆದಿರುವುದು ಧೃಡಪಟ್ಟಿದೆ ಎಂದು ಎಆರ್ ಸಲ್ಲಿಸಿರುವ ವರದಿಯಲ್ಲಿ ಸ್ಪಷ್ಟವಾಗಿದೆ ಎಂದರು. ಆದಿಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆ ಬಂದ ಬಾಬ್ತು 35 ಲಕ್ಷ ರು. ಗಳು, ಬೂದಿತಿಟ್ಟು, ಜ್ಯೋತಿಗೌಡಪುರದಲ್ಲಿರುವ 50 ಎಕರೆ ಜಮೀನಿನಲ್ಲಿ 21 ಎಕರೆ ಜಮೀನು ಗುತ್ತಿಗೆ ನೀಡಿರುವ ಬಾಬ್ತು, 28.95 ಲಕ್ಷ ರು.ಗಳು, ಸಂಘವು ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿದ್ದಾರೆ ಎಂದು ಸುಳ್ಳು ಹೇಳಿ ನಿರ್ವಹಣೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದು ಕೊಂಡಿರುವ 25ಲಕ್ಷ ರು. ಅಲ್ಲದೇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬಾಡಿಗೆ ನೀಡಿದ್ದ ನಿಲಯದ ಬಾಡಿಗೆ ಬಿಎಸಿಎಂದ ಇಲಾಖೆಯಿಂದ ಬಂದಿರುವ ಸಂಘಕ್ಕೆ ಬಂದಿರುವ 14.92 ಲಕ್ಷ ರು. 10 ಲಕ್ಷ ರು.ಗಳನ್ನು ಅನುದಾನವನ್ನು ಸಂಘಕ್ಕೆ ಪಡೆದುಕೊಂಡು ಲೆಕ್ಕ ಪತ್ರಗಳಲ್ಲಿ ನಮೂದಿಸಿಲ್ಲ. ಜೊತೆಗೆ ಅಡಿಟ್ ವರದಿಯಲ್ಲಿ ಸಹ ಇದರ ಬಗ್ಗೆ ಉಲ್ಲೇಖವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ವರದಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿ ಜಾರಿ ಮಾಡುವ ಜೊತೆಗೆ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಹಾಗೂ ಆಡಳಿತ ಅಧಿಕಾರಿಯನ್ನು ತಕ್ಷಣ ನೇಮಿಸಬೇಕು ಎಂದು ಮನವಿ ಮಾಡಿದರು.

ಗಡಿಕಟ್ಟೆ ಯಜಮಾನರ ತೀರ್ಮಾನಕ್ಕೂ ಬೆಲೆ ನೀಡಿಲ್ಲ:

ಮುಖಂಡ ಆರ್. ಮಹದೇವ್ ಮಾತನಾಡಿ, ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಆಡಳಿತ ಮಂಡಲಿಯವರು ಸಂಘದ ಆಸ್ತಿಯ ಕಬಳಿಕೆ ಮತ್ತು ಹಣ ದುರುಪಯೋಗಪಡಿಸಿಕೊಂಡಿರುವುದು ದೃಢಪಟ್ಟಿದೆ. ಈಗಾಲಾದರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನಮ್ಮ ಸಮಾಜದ ಸುಪ್ರೀಂ ಆದ ಗಡಿ ಕಟ್ಟೆ ಯಜಮಾನರ ತೀರ್ಮಾನಕ್ಕೂ ಬೆಲೆ ನೀಡಿಲ್ಲ, ಅವರ ಸೂಚಿಸಿದ ತೀರ್ಮಾನಕ್ಕೆ ಯಾವುದೇ ದಾಖಲೆ ನೀಡಿಲ್ಲ, ಇದರಿಂದಾಗಿ ಮುಂದೆ ಇಡೀ ಸಮುದಾಯವೇ ತಿರುಗಿ ಬೀಳುತ್ತೆ, ಈಗಲಾದರೂ ಸಮಾಜಕ್ಕೆ ಅನ್ಯಾಯ ಮಾಡಬೇಡಿ ಎಂದರು,

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ನಾಗವಳ್ಳಿ ನಾಗಯ್ಯ, ನಲ್ಲೂರು ಸೋಮೇಶ್ವರ, ನಲ್ಲೂರು ಮಹದೇವಸ್ವಾಮಿ, ನಿವೃತ್ತ ಲೆಕ್ಕಪರಿಶೋಧನಾ ಅಧಿಕಾರಿ ಚನ್ನಬಸವಯ್ಯ, ಯ. ಚನ್ನಂಜಯ್ಯ, ಸಿದ್ದಯ್ಯನಪುರ ಗೋವಿಂದರಾಜು ಇದ್ದರು.