ಕಾರಿನ ಕಿಟಕಿಯ ಗಾಜು ಒಡೆದು 9 ಲಕ್ಷ ದೋಚಿದ ದುಷ್ಕರ್ಮಿಗಳು

| Published : May 13 2024, 01:05 AM IST

ಸಾರಾಂಶ

ಕಾರು ನಿಲ್ಲಿಸಿ ಸ್ನೇಹಿತನ ಮನೆಗೆ ಕಾಫಿ ಕುಡಿಯಲು ತೆರಳಿದ್ದಾಗ ದುಷ್ಕರ್ಮಿಗಳು ಕಾರಿನ ಕಿಟಕಿ ಗಾಜು ಒಡೆದು ₹9 ಲಕ್ಷ ನಗದು ಕಳವು

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾರು ನಿಲ್ಲಿಸಿ ಸ್ನೇಹಿತನ ಮನೆಗೆ ಕಾಫಿ ಕುಡಿಯಲು ತೆರಳಿದ್ದಾಗ ದುಷ್ಕರ್ಮಿಗಳು ಕಾರಿನ ಕಿಟಕಿ ಗಾಜು ಒಡೆದು ₹9 ಲಕ್ಷ ನಗದು ಕಳವು ಮಾಡಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಚನ್ನಕೇಶವನಗರದ ಮಧುರ ಗಾರ್ಮೆಂಟ್ಸ್‌ ಬಳಿ ಮೇ 10ರಂದು ರಾತ್ರಿ ಸುಮಾರು 11ಕ್ಕೆ ಈ ಘಟನೆ ನಡೆದಿದೆ. ಆಂಧ್ರಪ್ರದೇಶ ಮೂಲದ ಮೊಹಮ್ಮದ್‌ ರಫಿ ಹಣ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಮೂಲದ ಮೊಹಮ್ಮದ್‌ ರಫಿ ಮೇ 10ರಂದು ರಾತ್ರಿ 7ಕ್ಕೆ ಚಿಕ್ಕಜಾಲದಲ್ಲಿ ಸ್ನೇಹಿತ ಧನಂಜಯ ಎಂಬುವವರಿಂದ ₹4 ಲಕ್ಷ ನಗದು ಪಡೆದುಕೊಂಡಿದ್ದರು. ಬಳಿಕ ಚನ್ನಕೇಶ್ವನಗರದ ಮಧುರ ಗಾರ್ಮೆಂಟ್ಸ್‌ ಬಳಿ ಕಾರನ್ನು ನಿಲ್ಲಿಸಿ ಸ್ನೇಹಿತ ಮನೋಹರ್‌ ಎಂಬುವವರ ಮನೆಗೆ ಕಾಫಿ ಕುಡಿಯಲು ತೆರಳಿದ್ದರು. ರಾತ್ರಿ 11ಕ್ಕೆ ಕಾರಿನ ಬಳಿ ಬಂದು ನೋಡಿದಾಗ ದುಷ್ಕರ್ಮಿಗಳು ಕಾರಿನ ಕಿಟಕಿ ಗಾಜು ಒಡೆದು ₹9 ಲಕ್ಷ ನಗದು ಹಣವಿದ್ದ ಬ್ಯಾಗ್‌ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಬಳಿಕ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಯಾರೋ ಗೊತ್ತಿರುವವರೇ ಈ ಕೃತ್ಯ ಎಸೆಗಿರುವ ಸಾಧ್ಯತೆಯಿದೆ. ಮೊಹಮ್ಮದ್‌ ರಫಿಕ್‌ ಹಣ ಪಡೆದು ಕಾರಿನಲ್ಲಿ ಇರಿಸಿಕೊಂಡಿರುವ ಬಗ್ಗೆ ತಿಳಿದುಕೊಂಡಿರುವವರೇ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.