ಸ್ವಾಧೀನ ಪಡಿಸಿಕೊಂಡು ಜಮೀನಿಗೆ ಹಾಕಿದ್ದ ಕಲ್ಲುಕಂಬ, ನಾಮಫಲಕ ಕಿತ್ತೆಸೆದ ಕಿಡಿಗೇಡಿಗಳು

| Published : Jul 03 2024, 12:20 AM IST

ಸ್ವಾಧೀನ ಪಡಿಸಿಕೊಂಡು ಜಮೀನಿಗೆ ಹಾಕಿದ್ದ ಕಲ್ಲುಕಂಬ, ನಾಮಫಲಕ ಕಿತ್ತೆಸೆದ ಕಿಡಿಗೇಡಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮಂಡಳಿ ನಿಗದಿಗೊಳಿಸಿದ ಪರಿಹಾರದ ಮೊತ್ತಕ್ಕೆ ಒಪ್ಪದ ಜಮೀನು ಮಾಲೀಕರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದರು. ರೈತರ ಮನವಿ ಆಲಿಸಿದ ನ್ಯಾಯಾಲಯ ಒಳ ಚರಂಡಿ ಮಂಡಳಿ ನಿಗದಿ ಮಾಡಿದ್ದ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ನೀಡುವಂತೆ ಆದೇಶಿಸಿತ್ತು. ಅದರಂತೆ ರೈತರಿಗೆ ಪರಿಹಾರ ಮೊತ್ತ ಸಿಗಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ರೈತರಿಂದ ಸ್ವಾಧೀನ ಪಡಿಸಿಕೊಂಡ ಜಮೀನು ಸರ್ವೇ ನಡೆಸಿ ಹದ್ದುಬಸ್ತು ಗುರುತಿಸಿ ಹಾಕಿದ್ದ ಕಲ್ಲುಕಂಬ ಹಾಗೂ ನಾಮಫಲಕವನ್ನು ಕಿಡಿಗೇಡಿಗಳು ಕಿತ್ತೆಸೆದಿರುವ ಸಂಬಂಧ ಪುರಸಭೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣದ ಬನ್ನಾರಮ್ಮ ದೇವಸ್ಥಾನದ ಮುಂಭಾಗ ಒಳಚರಂಡಿ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 2009ರಲ್ಲಿ ರೈತರ 5.20 ಎಕರೆ ಸ್ವಾಧೀನ ಪಡಿಸಿಕೊಂಡು ಪ್ರತಿ ಗುಂಟೆ ಜಮೀನಿಗೆ ಇಂತಿಷ್ಟು ಎಂದು ಪರಿಹಾರ ನಿಗದಿಗೊಳಿಸಿತ್ತು.

ಮಂಡಳಿ ನಿಗದಿಗೊಳಿಸಿದ ಪರಿಹಾರದ ಮೊತ್ತಕ್ಕೆ ಒಪ್ಪದ ಜಮೀನು ಮಾಲೀಕರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದರು. ರೈತರ ಮನವಿ ಆಲಿಸಿದ ನ್ಯಾಯಾಲಯ ಒಳ ಚರಂಡಿ ಮಂಡಳಿ ನಿಗದಿ ಮಾಡಿದ್ದ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ನೀಡುವಂತೆ ಆದೇಶಿಸಿತ್ತು. ಅದರಂತೆ ರೈತರಿಗೆ ಪರಿಹಾರ ಮೊತ್ತ ಸಿಗಲಿದೆ.

ಆದರೆ, ಸ್ವಾಧೀನಕ್ಕೊಳಪಟ್ಟಿರುವ ಜಮೀನಿನ ವಿಚಾರವಾಗಿ ರೈತರ ನಡುವೆ ಗೊಂದಲ ಏರ್ಪಟ್ಟು ಸ್ವಾಧೀನಕ್ಕೆ ಒಳಪಟ್ಟ ಜಮೀನು ನಮಗೆ ಸೇರಿದೆ. ನಮಗೂ ಪರಿಹಾರದ ಮೊತ್ತ ಸಿಗಬೇಕು ಎಂದು ಕೆಲ ರೈತರು ಹಠಕ್ಕೆ ಬಿದ್ದಿರುವುದು ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿಗೆ ಹಿನ್ನೆಡೆಯಾಗಿದೆ.

ಸರ್ವೇಗೆ ಅಡ್ಡಿ:

ಕಳೆದ ಮಾ.2ರಂದು ಪುರಸಭೆ ಅಧಿಕಾರಿಗಳು ಜಮೀನು ಸರ್ವೇಗೆ ತೆರಳಿದ್ದ ವೇಳೆ ಸ್ವಾಧೀನಕ್ಕೆ ಒಳಪಡುವ ಜಮೀನು ವಿಚಾರವಾಗಿ ಇಬ್ಬರು ರೈತರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಒಬ್ಬರು ಜಮೀನು ಸರ್ವೇ ಮಾಡಬೇಕು ಎಂದರೆ ಮತ್ತೊಬ್ಬರು ಯಾವುದೇ ಕಾರಣಕ್ಕೂ ಸರ್ವೇಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳು ಸರ್ವೇ ನಡೆಸದೆ ವಾಪಸ್ಸಾಗಿದ್ದರು.

ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸೂಚನೆ ಮೇರೆಗೆ ಭೂ ಮಾಪನ ಇಲಾಖೆ ಮತ್ತು ಪುರಸಭೆಯ ಕಂದಾಯ ಅಧಿಕಾರಿಗಳು ಕಳೆದ ಜೂ.21ರಂದು ಸರ್ವೇ ನಡೆಸಿ ಸ್ವಾಧೀನಕ್ಕೆ ಒಳಪಟ್ಟಿದ್ದ ಜಮೀನಿನ ಗಡಿ ಗುರುತಿಸಿ ಜೂ.26 ರಂದು ಕಲ್ಲುಕಂಬ ನೆಟ್ಟು, ಪುರಸಭೆಗೆ ಸೇರಿದ ಆಸ್ತಿ, ಎಸ್‌ಟಿಪಿ ಪ್ಲಾಂಟ್ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗ ಎಂದು ನಾಮಫಲಕ ಅಳವಡಿಸಿದ್ದರು.

ಜೂ.28ರಂದು ಅಧಿಕಾರಿಗಳು ನೆಟ್ಟಿದ್ದ ಕಲ್ಲುಕಂಬ ಹಾಗೂ ನಾಮಫಲಕ ಕಿತ್ತು ಹಾಕಲಾಗಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಪಾಂಡವಪುರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ನಾವು ನಕ್ಷೆ ಪ್ರಕಾರ ಸ್ವಾಧೀನಕ್ಕೆ ಒಳಪಟ್ಟಿರುವ ಜಮೀನನ್ನು ಸರ್ವೇ ನಡೆಸಿ ಗಡಿ ಗುರುತಿಸಿದ್ದೇವೆ. ಜಮೀನಿನ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಡೆಫಾಸಿಟ್ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯಾರ್ಥವಾದರೆ ಅದರ ಮಾಲೀಕರಿಗೆ ಪರಿಹಾರದ ಮೊತ್ತ ಸಿಗಲಿದೆ. ಆದರೆ, ಗಡಿ ಗುರುತಿಸಿ ಹಾಕಿದ್ದ ಕಲ್ಲು ಮತ್ತು ನಾಮಫಲಕ ನೆಟ್ಟಿರುವುದನ್ನು ಕಿತ್ತು ಹಾಕಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

- ವೀಣಾ, ಪುರಸಭೆ ಮುಖ್ಯಾಧಿಕಾರಿ ಪಾಂಡವಪುರ