ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಪೊಲೀಸ್ ಇಲಾಖೆಯು ಸಾರ್ವಜನಿಕ ವಲಯಗಳ ನಡುವೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ. ಇಲ್ಲಿ ಕರ್ತವ್ಯ ಸಲ್ಲಿಸುವ ಪ್ರತಿಯೊಬ್ಬರು ನಾಗರೀಕರ ವಲಯದಲ್ಲಿ ಗುರುತಿಸಿಕೊಂಡಲ್ಲಿ ಜನತೆಯೇ ಅವರನ್ನು ಸತ್ಕರಿಸಿ ಗೌರವಿಸುವುದರ ಮೂಲಕ ಸ್ಮರಿಸಿಕೊಳ್ಳುತ್ತಾರೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಗಂಗಾಧರ್ ಇವರು ವಯೋ ನಿವೃತ್ತಿ ನಿಮಿತ್ತ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾಮಾನ್ಯವಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿ ಪರ, ವಿರೋಧಗಳು ವ್ಯಕ್ತವಾಗುತ್ತವೆ. ಈ ಎಲ್ಲ ಒತ್ತಡಗಳ ನಡುವೆ ವಿವಿಧ ಕ್ಷೇತ್ರಗಳ ವ್ಯಕ್ತಿಗಳಿಂದಲೂ ಒತ್ತಡಗಳು ಸಂಭವಿಸುತ್ತಿರುತ್ತವೆ. ಈ ಎಲ್ಲ ಬೆಳವಣಿಗಳ ನಡುವೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸಾರ್ವಜನಿಕ ವಲಯವೇ ಗುರುತಿಸಿ ಸತ್ಕರಿಸುತ್ತದೆ. ನಗರದ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಗಂಗಾಧರಯ್ಯ ರಾಜ್ಯದ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಅರಸೀಕೆರೆಯಲ್ಲಿ ನಿವೃತ್ತರಾಗಿದ್ದಾರೆ. ಇವರ ನಿವೃತ್ತಿ ಜೀವನ ಹಸನಾಗಿರಲಿ ಮತ್ತು ಆರೋಗ್ಯಪೂರ್ಣವಾಗಿ ತಮ್ಮ ಕುಟುಂಬದೊಂದಿಗೆ ಸಾಗಲಿ ಎಂದು ಹೇಳಿದರು.ಡಿವೈಎಸ್ಪಿ ಲೋಕೇಶ್ ಮಾತನಾಡಿ, ಇಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿ ಹೋಗಿರುವ ಎಷ್ಟೋ ಅಧಿಕಾರಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇಂದು ನಿವೃತ್ತರಾಗಿರುವ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ರವರು ಅರಸೀಕೆರೆ ನಗರ ಠಾಣೆ ವ್ಯಾಪ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುವುದರ ಮೂಲಕ ಇಲಾಖೆಗೆ ಮಾದರಿಯಾಗಿದ್ದಾರೆಎಂದರು.ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ಮಾತನಾಡಿ, ಅರಸೀಕೆರೆ ನಾಗರೀಕರು ಸೌಮ್ಯ ಸ್ವಭಾವದವರಾಗಿದ್ದು, ಕಾನೂನು ಪರಿಪಾಲನೆಯಲ್ಲಿ ಸಾಕಷ್ಟು ಸಹಕಾರವನ್ನು ಇಲಾಖೆಯೊಂದಿಗೆ ನೀಡುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ನಡೆದ ಅನೇಕ ಪ್ರಕರಣಗಳನ್ನು ಪತ್ತೆ ಮಾಡಲು ಸಿಬ್ಬಂದಿ ಸಹಕಾರ ಮತ್ತು ಮೇಲಧಿಕಾರಿಗಳ ಮಾರ್ಗದರ್ಶನಗಳು ಪ್ರಮುಖ ಪಾತ್ರಗಳನ್ನು ವಹಿಸಿದೆ. ನನ್ನ ಸೇವಾ ಅವಧಿಯಲ್ಲಿ ನನ್ನೊಂದಿಗೆ ಕರ್ತವ್ಯ ನಿರ್ವಹಿಸಿದ ಎಲ್ಲ ಸಿಬ್ಬಂದಿಗೂ ನಾನು ಅಭಾರಿಯಾಗಿ ಸ್ಮರಿಸಿಕೊಳ್ಳುತ್ತೇನೆ. ಇಂದು ನಮ್ಮೊಂದಿಗೆ ನಗರದ ನಾಗರೀಕರು, ಸಂಘ ಸಂಸ್ಥೆಯವರು, ಸಮಾಜದವರು ಭಾಗವಹಿಸಿರುವುದು ನನಗೇ ಅತೀವ ಸಂತಸ ತಂದಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್, ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಲತಾ, ಬಾಣಾವರ ಠಾಣೆ ಸಬ್ ಇನ್ಸ್ಪೆಕ್ಟರ್ ಸುರೇಶ್, ಕಸಬಾ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಸಿಬ್ಬಂದಿ ಸಿದ್ದೇಶ್, ಪ್ರವೀಣ್ ಇನ್ನಿತರರು ಭಾಗವಹಿಸಿದ್ದರು.