ಚಿಕ್ಕಮಗಳೂರುಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮಂಗಳವಾರ ಸಂಜೆ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರೀನಂದಾ (15) ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾಳೆ.
ಮಾಣಿಕ್ಯಧಾರಾ ಜಲಪಾತದ ಬಳಿ 2 ಸಾವಿರ ಅಡಿ ಪ್ರಪಾತದಲ್ಲಿ ಬಾಲಕಿ ಶವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮಂಗಳವಾರ ಸಂಜೆ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರೀನಂದಾ (15) ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾಳೆ.
ಜಲಪಾತದ ಬಳಿಯ 2 ಸಾವಿರ ಅಡಿ ಪ್ರಪಾತದಲ್ಲಿ ಶ್ರೀನಂದಾ ಮೃತದೇಹ ಪತ್ತೆಯಾಗಿದೆ.ಕೇರಳದಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮ್ ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಮಂಗಳವಾರ ಭೇಟಿ ನೀಡಿದ್ದಾಗ ಸಂಜೆ 5.30ರ ವೇಳೆಗೆ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳ ಸೇರಿದಂತೆ ಸುತ್ತಮುತ್ತ ನಾಪತ್ತೆಯಾಗಿದ್ದ ಬಾಲಕಿ ಪತ್ತೆಗಾಗಿ ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿತ್ತು. ಇವರೊಂದಿಗೆ ಎನ್‌ಡಿಆರ್‌ಎಫ್, ಅರಣ್ಯ ಇಲಾಖೆ ಮತ್ತು ಪೊಲೀಸ್ ತಂಡಗಳ ಸೇರಿ 3 ದಿನಗಳ ತೀವ್ರ ಶೋಧದ ನಂತರ ಶುಕ್ರವಾರ ಮೃತದೇಹ ಪತ್ತೆಯಾಗಿದೆ.ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ತಂಡಗಳು ಸತತ ಮೂರು ದಿನದಿಂದ ಮಾಣಿಕ್ಯಧಾರಾ ಭಾಗದ ಅರಣ್ಯ ಪ್ರದೇಶದಲ್ಲಿ ಇಂಚಿಂಚೂ ಹುಡುಕಾಟ ನಡೆಸಿದ್ದವು. ಶೋಲಾ ಅರಣ್ಯ ಪ್ರದೇಶದಲ್ಲಿ ಕಡಿದಾದ ಕಣಿವೆ, ಪ್ರಪಾತಗಳು ಇದ್ದಿದ್ದರಿಂದ ಡ್ರೋಣ್ ಹಾಗೂ ಥರ್ಮಲ್ ಕ್ಯಾಮರಾಗಳನ್ನು ಶೋಧ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.
ಸತತ ಮೂರು ದಿನಗಳ ತೀವ್ರ ಶೋಧದ ನಂತರ, ಶುಕ್ರವಾರ ಮಾಣಿಕ್ಯಧಾರದ ಅತ್ಯಂತ ಆಳವಾದ ಪ್ರಪಾತದ ಕೆಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. -- ಬಾಕ್ಸ್....ಮುಗಿಲು ಮುಟ್ಟಿದ ಪಾಲಕರ ಆಕ್ರಂದನ
ತಮ್ಮ ಮಗಳು ಬದುಕಿ ಬರಲಿ ಎಂದು ಕಾದು ಕುಳಿತಿದ್ದ ಶ್ರೀನಂದಾ ಪಾಲಕರಿಗೆ ಶುಕ್ರವಾರ ಬೆಳಗ್ಗೆ ತಮ್ಮ ಮಗಳು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆವರ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂಬ ಅನುಮಾನದಲ್ಲಿದ್ದ ಪಾಲಕರು ಪೊಲೀಸರು ಅವಲನ್ನುಪತ್ತೆ ಮಾಡಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲೇ ಇದ್ದರು.ಆದರೆ ಶುಕ್ರವಾರ ಬೆಳಗ್ಗೆ ಮಾಣಿಕ್ಯಧಾರಾ ಸಮೀಪದಲ್ಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಕಡಿದಾದ ಪ್ರಪಾತದ ಬಳಿ ಡ್ರೋಣ್ ಹಾರಿಸಿದಾಗ ಪ್ರಪಾತದ ತಳಭಾಗದಲ್ಲಿ ಮೃತದೇಹ ಇರುವುದನ್ನು ಪತ್ತೆ ಮಾಡಿದರು. ಆ ಮೃತದೇಹದ ಫೋಟೋ ನೋಡಿದ ಪಾಲಕರು ಇದು ತಮ್ಮ ಮಗಳೇ ಎಂದು ಗುರುತಿಸಿದರು. ಆಗ ಪ್ರವಾಸಕ್ಕೆ ಬಂದಿದ್ದ ಕೇರಳದ ಪ್ರವಾಸಿಗರು ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.-- ಬಾಕ್ಸ್....
ಮಾಣಿಕ್ಯಧಾರ ಬಳಿಯೇ ಪತ್ತೆಮಾಣಿಕ್ಯಧಾರ ಜಲಪಾತದಿಂದ ಕೇವಲ ಕಾಲು ಕಿಲೋಮೀಟರ್ ದೂರದಲ್ಲೇ ಶ್ರೀನಂದಾ ಶವ ಸಿಕ್ಕಿದೆ. ಶ್ರೀನಂದಾ ನಾಪತ್ತೆಯಾದ ಮೊದಲ ದಿನವೇ ಪೊಲೀಸ್ ಸಿಬ್ಬಂದಿ ಈ ಭಾಗದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಪ್ರಪಾತದ ತಳಭಾಗ ಗಮನಿಸಿರಲಿಲ್ಲ. ಮೊದಲ ದಿನ ಕಾರ್ಯಾಚರಣೆ ನಡೆಸಿದ ಪೊಲೀಸರು 50 ಅಡಿ ಮುಂದೆ ಹೋಗಿದ್ದರೂ ಅಂದೇ ಶವ ಪತ್ತೆಯಾಗುತ್ತಿತ್ತು.
ಆದರೆ ಒಂದು ವೇಳೆ ಶ್ರೀನಂದಾ ಪ್ರಪಾತಕ್ಕೆ ಬಿದ್ದಿದ್ದರೂ ಅಷ್ಟು ಆಳಕ್ಕೆ ಬೀಳಲು ಸಾಧ್ಯವಿಲ್ಲ ಎಂದು ವಾಪಸ್ ಆಗಿದ್ದರು. ಬಳಿಕ ಸಮೀಪದ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದ್ದರು. ಬಳಿಕ ಶುಕ್ರವಾರ ಮತ್ತೆ ಮಾಣಿಕ್ಯಧಾರ ಬಳಿ ಹುಡುಕಾಟ ನಡೆಸಿದಾಗ ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಶ್ರೀನಂದಾ ಶವ ಪತ್ತೆಯಾಗಿದೆ....ಬಾಕ್ಸ್...ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿಂದ ಶವ ಪರೀಕ್ಷೆ
ಚಿಕ್ಕಮಗಳೂರು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಇಬ್ಬರು ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಾಮಾನ್ಯವಾಗಿ ಒಬ್ಬರು ವೈದ್ಯರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಈ ಪ್ರಕರಣದಲ್ಲಿ ವೈದ್ಯರಾದ ಲೋಹಿತ್ ಹಾಗೂ ಜಯಲಕ್ಷ್ಮಿ ಎಂಬ ಇಬ್ಬರು ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪೊಲೀಸರ ಮನವಿ ಹಿನ್ನೆಲೆ ಇಬ್ಬರು ತಜ್ಞ ವೈದ್ಯರಿಂದ ಶವಪರೀಕ್ಷೆ ನಡೆಸಿದರು.