ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಅಕ್ಕಮಹಾದೇವಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ರಚಿಸಲಾಗಿದ್ದು, ರೈತರು ಹಾಗೂ ಮಹಿಳೆಯರು ಕಂಪನಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್. ಕರೆ ನೀಡಿದರು.ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಅಕ್ಕಮಹಾದೇವಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಮುಖ ಕಾರ್ಯಕ್ರಮವಾದ ಡೇ-ಎನ್.ಆರ್.ಎಲ್.ಎಮ್ ಯೋಜನೆಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯನ್ನು ರಚಿಸಲಾಗಿದ್ದು, ಸಂಸ್ಥೆಯು ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವ ನೋಪಾಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿನ ಮಹಿಳಾ ಸ್ವ ಸಹಾಯ ಸಂಘ, ರೈತ ಮಹಿಳೆಯರಿಂದ ಷೇರು ಸಂಗ್ರಹಿಸಿ ಸ್ಥಾಪಿಸಲಾದ ಕಂಪನಿಯಲ್ಲಿ 1000 ಮಹಿಳೆಯರು ಷೇರುದಾರರಾಗಿದ್ದು, ಸರ್ಕಾರ ತನ್ನ ಪಾಲಿನ ವಂತಿಕೆ ನೀಡುತ್ತದೆ. ಇದರಿಂದ ಕಂಪನಿಯನ್ನು ಬಲಪಡಿಸಿ ಕೃಷಿಗೆ ಬೇಕಾದ ಸವಲತ್ತು ಒದಗಿಸಲಾಗುತ್ತದೆ ಎಂದು ತಿಳಿಸಿದರು.ಅಕ್ಕಮಹಾದೇವಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಸಂಸ್ಥೆಯಲ್ಲಿ ಮಹಿಳೆಯರಿಂದ ಷೇರುರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ಸೃಷ್ಟಿಸಿ ಅವರನ್ನು ಉದ್ಯಮಶೀಲರನ್ನಾಗಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದ ಅವರು, ರೈತರು ಹಾಗೂ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಪಂ ಇಒ ಕಿರಣ್‌ಕುಮಾರ್ ಹರ್ತಿ ಮಾತನಾಡಿ, ಸರ್ಕಾರದ ನಿಯಮದ ಅನುಸಾರ ಸಂಸ್ಥೆಯನ್ನು ಸ್ಥಾಪಿಸಿದ್ದು, ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಸರ್ಕಾರದ ಪ್ರಾಯೋಜಿತ ಎಫ್‌ಪಿಓ ಯೋಜನೆಯಡಿ ಮಹಿಳಾ ಸಮೂಹಗಳಿಂದ ಗುರುತಿಸಲ್ಪಟ್ಟಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ 60 ಮಹಿಳಾ ಪ್ರೊಡ್ಯೂಸರ್ ಕಂಪನಿಗಳನ್ನು ರಚಿಸಲಾಗಿದೆ. ತಾಲ್ಲೂಕಿನ 43 ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ರೈತರಿಂದ ಒಟ್ಟು ಒಂದು ಸಾವಿರ ಷೇರುದಾರರಿಂದ ತಲಾ 1500 ರು. ಸಂಗ್ರಹಿಸಲಾಗುತ್ತದೆ. ಭೂಮಿ ಹಾಗೂ ಜಲಸಂಪನ್ಮೂಲಗಳ ಪುನರುಜ್ಜೀವನ ಅವುಗಳ ಬಳಕೆ ಸಂರಕ್ಷಣೆ ಮತ್ತು ಪ್ರಾರ್ಥಮಿಕ ಹಂತದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವುದು. ಸಹಕಾರ ಮನೋಭಾವ ಬೆಳೆಸುವುದು, ಹಣಕಾಸಿನ ಸೇವೆ ಮತ್ತು ಉತ್ಪನ್ನಗಳಿಗೆ ವಿಮೆ ಸೌಲಭ್ಯಗಳನ್ನು ದೊರಕಿಸುವುದು ಹೀಗೆ ಹಲವು ರೀತಿಯಲ್ಲಿ ಪ್ರೋತ್ಸಾಹ ಒದಗಿಸುವುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಂಡುರಂಗ ರಾವ್ ಸಹಾಯಕ ನಿರ್ದೇಶಕರು (ಗ್ರಾ.ಉ), ರಾಜು ಸಿ.ಜಿ ಸಹಾಯಕ ನಿರ್ದೇಶಕರು (ಪಂ.ರಾ.) ಮತ್ತು ಸಂಪನ್ಮೂಲ ವ್ಯಕ್ತಿ ಶಿವಮೊಗ್ಗ ಚೈತ್ನನ್ಯ ಸಂಸ್ಥೆಯ ಬದರೀಶ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದೇವರಾಜ್,ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಗೂ ತಾಲೂಕಿನ ಸಂಜೀವಿನಿ ಘಟಕದ ನಿರ್ದೇಶಕರಾದ ಕರಿಬಸಮ್ಮ, ವಸಂತ, ಶಶಿಕಲಾ, ಸುಜಾತ, ಪ್ರೇಮ, ಮಂಜುಳ, ಶಿಲ್ಪಾ, ಜ್ಯೋತಿಬಾಯಿ, ಶಂಷದ್ ಭಾನು ಹಾಗೂ 43 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಲ್ಲಾ ಸಿಬ್ಬಂದಿ ಹಾಗೂ ಷೇರುದಾರರು ಉಪಸ್ಥಿತರಿದ್ದರು.