ಸಾರಾಂಶ
ಒಂದು ಸಮುದಾಯವನ್ನು ತೃಪ್ತಿಪಡಿಸುವ ಸಲುವಾಗಿ ವಕ್ಫ್ ಸಚಿವ ಜಮೀರ್ ಅವರಿಂದ ರೈತರ ಜಮೀನುಗಳು, ಶಾಲಾ ಆವರಣಗಳು, ಮಠ, ಮಂದಿರಗಳನ್ನು ವಕ್ಫ್‌ಬೋರ್ಡ್ ಆಸ್ತಿಯೆಂದು ಕಬಳಿಸುವ ಮನಸ್ಥಿತಿಯಲ್ಲಿ ಇದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು. ಹೊಳೆನರಸೀಪುರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ನಮ್ಮ ದೇಶದ ಮೇಲೆ ಮಹಮದ್ ಗಜನಿ, ಮಹಮ್ಮದ್ ಘೋರಿ ಹಾಗೂ ಇತರರು ದಾಳಿ ನಡೆಸಿ, ಹಿಂದುಗಳನ್ನು ಕೊಳ್ಳೆ ಹೊಡೆದರು. ಆದರೆ ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರವೂ ಒಂದು ಸಮುದಾಯವನ್ನು ತೃಪ್ತಿಪಡಿಸುವ ಸಲುವಾಗಿ ವಕ್ಫ್ ಸಚಿವ ಜಮೀರ್ ಅವರಿಂದ ರೈತರ ಜಮೀನುಗಳು, ಶಾಲಾ ಆವರಣಗಳು, ಮಠ, ಮಂದಿರಗಳನ್ನು ವಕ್ಫ್‌ಬೋರ್ಡ್ ಆಸ್ತಿಯೆಂದು ಕಬಳಿಸುವ ಮನಸ್ಥಿತಿಯಲ್ಲಿ ಇದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಹಾಸನ ಜಿಲ್ಲೆಯಲ್ಲಿ ರೈತರು ತಮ್ಮ ಜಮೀನಿನ ಪಹಣಿಗಳ ಪರಿಶೀಲನೆ ನಡೆಸಬೇಕಿದೆ, ನಿಮ್ಮ ಭೂಮಿಯನ್ನು ವಕ್ಫ್ ಆಸ್ತಿಯೆಂದು ಕಾಲಂ ೯ರಲ್ಲಿ ನಮೂದಿಸುವ ಸಾದ್ಯತೆ ಹೆಚ್ಚಿದೆ. ಈ ರೀತಿಯ ಸಮಸ್ಯೆ ಕಂಡುಬಂದಲ್ಲಿ ಬಿಜೆಪಿ ತಾಲೂಕು ಘಟಕದ ಸದಸ್ಯರನ್ನು ಸಂಪರ್ಕಿಸಿ, ನಿಮಗೆ ನ್ಯಾಯ ಕೊಡಿಸಲು ಬಿಜೆಪಿ ಸಿದ್ಧವಿದೆ ಎಂದು ತಿಳಿಸಿದರು.
ಬಿಜೆಪಿ ಮಂಡಲ ನಿಕಟಪೂರ್ವ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಚಿವ ಜಮೀರ್ ಅಹಮ್ಮದ್ ಅವರನ್ನು ಉಚ್ಛಾಟಿಸಬೇಕು. ಜತೆಗೆ ಜನರ ಕ್ಷಮೆ ಕೇಳಬೇಕು. ಈ ಕುರಿತು ಗೆಜೆಟ್ ನೋಟಿಫಿಕೇಷನ್ ರದ್ಧು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಯುವ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಮಾತನಾಡಿ, ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸುವ ಸಲುವಾಗಿ ನ.೭ರ ಗುರುವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಎತ್ತಿನಗಾಡಿಯೊಂದಿಗೆ ಪ್ರತಿಭಟನಾ ಮೆರವಣಿಗೆ, ಶ್ರೀ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಜತೆಗೆ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸುತ್ತೇವೆ ಎಂದರು.
ಬಿಜೆಪಿಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಹಾಗೂ ವಿದ್ಯಾಪ್ರಸಾದ್, ಮುಖಂಡರಾದ ಯೋಗನರಸಿಂಹ, ಯೋಗೇಶ್, ದೇವರಾಜು, ಅಭಿಷೇಕ್, ಶ್ರೀನಿವಾಸ ಇದ್ದರು.