ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಮಾಹೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಗಣಿತಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಗಣಿತದಲ್ಲಿ ಮಹಿಳೆಯರ ದಿನಾಚರಣೆಯನ್ನು ನಡೆಸಲಾಯಿತು. ಎರಡು ದಿನಗಳ ಈ ಕಾರ್ಯಕ್ರಮ ಗಣಿತಶಾಸ್ತ್ರಕ್ಕೆ ಮಹಿಳೆಯರ ಕೊಡುಗೆಗಳನ್ನು ಆಚರಿಸಲು ಮತ್ತು ಗೌರವಿಸುವ ಗುರಿಯನ್ನು ಹೊಂದಿದೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರಿನ ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ಎನ್. ನಾಯಕ್ ಭಾಗವಹಿಸಿ, ಲಿಂಗಭೇದ ಇಲ್ಲದೇ ಎಲ್ಲರಿಗೂ ಸಮಾನ ಅವಕಾಶಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಮಹಿಳೆಯರು ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು. ಮಹಿಳಾ ಸಬಲೀಕರಣಕ್ಕಾಗಿ ಕೆಲಸದ ಸ್ಥಳವನ್ನು ಬೆಂಬಲಿಸುವ ಮತ್ತು ಹೊಂದಿಕೊಳ್ಳುವ ವಾತಾವರಣವನ್ನು ಸೃಷ್ಟಿಸುವ ಮಹತ್ವವನ್ನು ಒತ್ತಿ ಹೇಳಿದರು.
ಮಾಹೆಯ ಕುಲಸಚಿವ (ಮೌಲ್ಯಮಾಪನ) ಡಾ. ವಿನೋದ್ ವಿ. ಥಾಮಸ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಅವರು ವಿಶೇಷವಾಗಿ ಎಂಜಿನಿಯರಿಂಗ್‌ನಲ್ಲಿ ಮಹಿಳೆಯರಿಗೆ ಮಾಹೆಯ ದೃಢವಾದ ಬೆಂಬಲವನ್ನು, ಲಿಂಗ ಸಮಾನತೆಗೆ ಅದರ ಬದ್ಧತೆಗಾಗಿ ಎಂಐಟಿಯ ಗಣಿತಶಾಸ್ತ್ರ ವಿಭಾಗದ ಬಗ್ಗೆ ಹೇಳಿದರು. ಗಣಿತ ವಿಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರ ಗಮನಾರ್ಹ ಪ್ರಾತಿನಿಧ್ಯವನ್ನು ಶ್ಲಾಘಿಸಿದರು.ಎಂಐಟಿಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಅಧ್ಯಕ್ಷತೆ ವಹಿಸಿ, ಲಿಂಗ ಸಮಾನತೆಗಾಗಿ ಮಾಹೆಯು ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ಶ್ರೇಯಾಂಕದಲ್ಲಿ ಗುರುತಿಸಲ್ಪಟ್ಟಿರುವುರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಂಗವಾಗಿ ಲಿಟ್ಲ್ ರಾಕ್ ಇಂಡಿಯನ್ ಶಾಲೆಯ ಉಪನಿರ್ದೇಶಕಿ ಲಾಲಿ ಅಬ್ರಹಾಂ ಮ್ಯಾಥ್ಯೂ ಮತ್ತು ತೆಕ್ಕಟ್ಟೆಯ ಸರ್ಕಾರಿ ಜೂನಿಯರ್ ಕಾಲೇಜಿನ ಉಪಪ್ರಾಂಶುಪಾಲೆ ಸಂಧ್ಯಾ ರಾಣಿ ಅವರನ್ನು ಸನ್ಮಾನಿಸಲಾಯಿತು.ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಕುಂಚಮ್ ಶ್ಯಾಮ್ ಪ್ರಸಾದ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಡಾ.ಸುಜಾತಾ ಎಚ್.ಎಸ್. ಕಾರ್ಯಕ್ರಮದ ಸ್ಥೂಲ ವಿವರಣೆ ನೀಡಿದರು. ಸಂಘಟನಾ ಕಾರ್ಯದರ್ಶಿ ಡಾ.ಅಶ್ವಿನಿ ಭಟ್ ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಿಕ ಸಂಚಾಲಕಿ ಡಾ. ದಿವ್ಯಾ ಶೆಣೈ ವಂದಿಸಿದರು.