ಕನ್ನಡಪ್ರಭ ವಾರ್ತೆ ಯಳಂದೂರುಪಟ್ಟಣದ ಟಿಎಪಿಸಿಎಂಎಸ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 11 ಮಂದಿ ನಿರ್ದೇಶಕರಿಗೆ ಶಾಸಕ ಎ.ಆರ್‌. ಕೃಷ್ಣಮೂರ್ತಿ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಅವರು, ಯಳಂದೂರು ಪಟ್ಟಣದಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟಕಗಾರರ ಸಹಕಾರ ಸಂಘಕ್ಕೆ 77 ವರ್ಷಗಳ ಇತಿಹಾಸವಿದೆ. ಆದರೆ ಕಳೆದ ಕೆಲವು ಅವಧಿಯಲ್ಲಿ ಇದು ನಷ್ಟಕ್ಕೆ ಸಿಲುಕಿತ್ತು. ಈಗಲೂ ಕೂಡ 2 ಕೋಟಿ ರು. ಸಾಲ ಈ ಸೊಸೈಟಿ ಮೇಲಿದೆ. ಈಗ ಆಯ್ಕೆಯಾಗಿರುವ ನಿರ್ದೇಶಕರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಸೊಸೈಟಿಯನ್ನು ಸಾಲ ಮುಕ್ತವಾಗಿ ಮಾಡಬೇಕು. ಇದಕ್ಕೆ ಬೇಕಾದ ನೆರವನ್ನು ನಾನು ನೀಡಲು ಸಿದ್ಧನಿದ್ದೇನೆ. ಆದರೆ ಪ್ರಾಮಾಣಿಕವಾಗಿ ಇದಕ್ಕೆ ಕೆಲಸವನ್ನು ಮಾಡಬೇಕು. ರೈತರಿಗೆ ಅನುಕೂಲವಾಗುವ ಕೆಲಸಗಳನ್ನು ನಿರ್ವಹಿಸಬೇಕು. ಈ ಹಿಂದೆ ಇಲ್ಲಿ ಇಡೀ ತಾಲೂಕಿಗೆ ಪಡಿತರವನ್ನು ಈ ಸಂಘದ ಮೂಲಕವೇ ಸಗಟು ವ್ಯಾಪಾರ ಮಾಡಲಾಗುತ್ತಿತ್ತು. ಇದಕ್ಕೆ ಬೇಕಾದ ದೊಡ್ಡ ಗೋದಾಮು ಕೂಡ ಇಲ್ಲಿದೆ. ಹಾಗಾಗಿ ಇದನ್ನು ಮತ್ತೆ ಆರಂಭಿಸುವಲ್ಲಿ ಇಲ್ಲಿನ ನಿರ್ದೇಶಕರು ಯೋಜನೆ ರೂಪಿಸಬೇಕು. ಸಂಘವನ್ನು ಸಾಲದಿಂದ ಮುಕ್ತಗೊಳಿಸಿ ಲಾಭಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಬೇಕು. ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷರಾದ ಜಯರಾಮುರವರು ಯಳಂದೂರಿನವರೇ ಆಗಿದ್ದಾರೆ. ಅವರೂ ಕೂಡ ನಿಮಗೆ ಎಲ್ಲಾ ರೀತಿಯ ನೆರವನ್ನು ನೀಡಲಿದ್ದಾರೆ. ಹಾಗಾಗಿ ಇದರ ಅಭಿವೃದ್ಧಿ ಕಡೆ ಗಮನ ನೀಡಬೇಕು. ಮತ್ತೆ ಇದರ ವೈಭವವನ್ನು ಮರುಕಳಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರಾದ ಜೆ. ಯೋಗೇಶ್, ಗೌಡಹಳ್ಳಿ ಎಸ್. ರವಿ, ಪುಟ್ಟಚಾಮಮ್ಮ, ಮಹದೇವಮ್ಮ, ಮಹೇಶ್, ಸಿ. ನಂಜುಂಡಸ್ವಾಮಿ, ವೈ.ಎನ್. ಚೇತನ್, ಬಿ. ಪರಶಿವಮೂರ್ತಿ, ಸಿ. ಪುಟ್ಟರಾಜು, ಸಿದ್ಧಶೆಟ್ಟಿ, ಎಂ.ಸಿ. ಶ್ರೀಕಂಠಮೂರ್ತಿರನ್ನು ಸನ್ಮಾನಿಸಲಾಯಿತು.ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭು ಪ್ರಸಾದ್, ಎಂಸಿಡಿಸಿಸಿ ಬ್ಯಾಂಕ್‌ನ ಉಪಾದ್ಯಕ್ಷ ಜಯರಾಮು, ಬಿಳಿಗಿರಿ ರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್ ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಅಂಬೇಡ್ಕರ್‌ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ಧರಾಜು, ನಟರಾಜು ಸೇರಿದಂತೆ ಅನೇಕರು ಇದ್ದರು.

---2204ವೈಎಲ್‌ಡಿಪಿ02ಯಳಂದೂರು ಪಟ್ಟಣದ ಶಾಸಕರ ಕಚೇರಿಯಲ್ಲಿ ಈಚೆಗೆ ಟಿಎಪಿಸಿಎಂಎಸ್‌ಗೆ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸನ್ಮಾನಿಸಿದರು.