ಸಾರಾಂಶ
ನೀರಿನ ಹರಿವು ಹೆಚ್ಚಳ ಹಿನ್ನೆಲೆ ಶಾಸಕರ ವೀಕ್ಷಣೆ । ಸಂತ್ರಸ್ಥರಿಗೆ ಗುಣಮಟ್ಟದ ಊಟೋಪಚಾರಕ್ಕೆ ತಾಕೀತು
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ನದಿ ಪಾತ್ರಗಳ ಗ್ರಾಮಕ್ಕೆ ಕಾವೇರಿ ನೀರಿನ ಪ್ರಮಾಣದ ಹರಿವು ಹೆಚ್ಚಳವಾದ ಹಿನ್ನೆಲೆ ನದಿ ಪಾತ್ರಗಳ ಗ್ರಾಮಕ್ಕೆ ದೌಡಾಯಿಸಿದ ಶಾಸಕರು ಅಲ್ಲೆ ಉಳಿದ ಹಲವರನ್ನು ಕೂಡಲೆ ಸುರಕ್ಷಿತ ಸ್ಥಳಕ್ಕೆ ಬನ್ನಿ ಎಂದು ತಿಳಿವಳಿಕೆ ಹೇಳಿದರು. ತಾಲೂಕು ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಗ್ರಾಮಗಳಾದ ಮುಳ್ಳೂರು, ದಾಸನಪುರ, ಹಳೇ ಅಣಗಳ್ಳಿ, ಹಳೇ ಹಂಪಾಪುರ ಗ್ರಾಮಗಳಲ್ಲಿ ತಡರಾತ್ರಿ ಕೆ.ಆರ್.ಎಸ್ ಡ್ಯಾಂನಿಂದ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾದ ಕಾರಣ ಮುಂದಾಗುವ ಅನಾಹುತ ತಪ್ಪಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ಅಲ್ಲಿ ವಾಸ್ತವ್ಯವಿದ್ದ ಅನೇಕರನ್ನು ಕಳೆದ ರಾತ್ರಿಯೇ ಕೊಳ್ಳೇಗಾಲ ಮಹದೇಶ್ವರ ಕಾಲೇಜು ಸೇರಿದಂತೆ ಹಲವೆಡೆ ತೆರೆಯಲಾದ ಸಂತ್ರಸ್ತ ಕೇಂದ್ರಕ್ಕೆ ರವಾನಿಸಿತು.ಈ ಹಿನ್ನೆಲೆ ಬುಧವಾರ ಬೆಳಗ್ಗೆ ಶಾಸಕರು ದಾಸನಪುರ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಪ್ರಮಾಣ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯಗಳಿಂದ ಇಲ್ಲಿಯವರೆಗೆ 1.6ಲಕ್ಷ ಕ್ಯುಸೆಕ್ ನೀರು ಬಿಡುಗಡೆಯಾಗುತ್ತಿತ್ತು. ಆದರೆ ತಡರಾತ್ರಿ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆ ಪ್ರವಾಹ ಎದುರಾಗಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ದಾಸನಪುರ ಗ್ರಾಮದ ಜನರನ್ನು ತಡರಾತ್ರಿ ಕೊಳ್ಳೇಗಾಲದ ಮಹದೇಶ್ವರ ಹಾಸ್ಟೆಲ್ ನಲ್ಲಿರುವ ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರಿಸಿರುವ ಕುರಿತು ಅಧಿಕಾರಿಗಳು ವಿವರಣೆ ನೀಡಿದರು. ಈ ವೇಳೆ ಅಲ್ಲಿದ್ದ ಹಲವು ನಿವಾಸಿಗಳನ್ನು ಜೀವ ಅಮೂಲ್ಯವಾದುದು, ನೀರಿನ ಹರಿವು ಹೆಚ್ಚಳವಾಗುತ್ತಿದ್ದಂತೆ ನೀವು ಸಂತ್ರಸ್ಥ ಕೇಂದ್ರಕ್ಕೆ ತೆರಳಿ ಎಂದು ಇದೆ ವೇಳೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೇಶ್ ಮಾತನಾಡಿ, ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯಗಳಿಂದ ನೀರಿನ ಬಿಡುಗಡೆ ಪ್ರಮಾಣ ಹೆಚ್ಚಾಗಿದ್ದು ನರಸೀಪುರ ಮಾರ್ಗವಾಗಿ ಎರಡು ಜಲಾಶಯಗಳ ನೀರು ಒಗ್ಗೂಡಿ ನಮ್ಮ ತಾಲೂಕು ವ್ಯಾಪ್ತಿಯ ಕಾವೇರಿ ನದಿ ಗ್ರಾಮಗಳಲ್ಲಿ ಪ್ರವಾಹದ ದುಸ್ಥಿತಿ ಕಂಡು ಬಂದಿದ್ದು ತಡರಾತ್ರಿ ಇದ್ದಕ್ಕಿದ್ದ ಹಾಗೆ 2 ಲಕ್ಷ ಕ್ಯುಸೆಕ್ ನೀರು ಹರಿದು ಬಂದ ಕಾರಣ ಕೂಡಲೇ ದಾಸನಪುರ ಗ್ರಾಮದ ಜನರನ್ನು ಕೊಳ್ಳೇಗಾಲದ ಮಹದೇಶ್ವರ ಹಾಸ್ಟೆಲ್ ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದೇವೆ.
ಆದರೆ ಇಂದು ಬೆಳಿಗ್ಗೆ ನೀರಿನ ಪ್ರಮಾಣ 1.8 ಲಕ್ಷ ಕ್ಯುಸೆಕ್ ಗೆ ಇಳಿದಿದೆ. ಸದ್ಯದ ಮಟ್ಟಿಗೆ ಯಾವುದೇ ರೀತಿಯ ಪ್ರವಾಹ ಎದುರಾಗುವ ಸಂದರ್ಭವಿಲ್ಲ. ನಮ್ಮ ತಾಲೂಕು ಆಡಳಿತ ಅಧಿಕಾರಿಗಳ ತಂಡ ನದಿ ಪಾತ್ರದ ಗ್ರಾಮಗಳಲ್ಲಿ ವಾಸ್ತವ ಹೂಡಿದ್ದು ಜನರ ರಕ್ಷಣೆಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರವಾಹ ಎದುರಾಗುವ ಗ್ರಾಮಗಳ ಸ್ಥಳಗಳಲ್ಲಿ ಅಗ್ನಿಶಾಮಕದಳ,ಜಾನುವಾರು ರಕ್ಷಣೆಗಳಿಗೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ಇನ್ನಿತರ ಗ್ರಾಪಂ ಅಧಿಕಾರಿಗಳು ಜನರ ರಕ್ಷಣೆಗೆ ಮುಂದಾಗಲಿದ್ದಾರೆ. ಜನರು ಆತಂಕ ಪಡುವ ಅಗತ್ಯವೇನು ಇಲ್ಲ ಜನರ ರಕ್ಷಣೆಗೆ ತಾಲೂಕು ಆಡಳಿತ ಸರ್ವಸನ್ನದ್ಧವಾಗಿದೆ ಎಂದರು.ಈ ವೇಳೆ ತಹಸೀಲ್ದಾರ್ ಮಂಜುಳಾ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಮಾದಯ್ಯ, ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಎಚ್.ವಿ.ಚಂದ್ರು, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಇದ್ದರು.ಊಟೋಪಚಾರ ಕುರಿತು ನಿವಾಸಿಗಳಿಂದ
ಅಭಿಪ್ರಾಯ ಸಂಗ್ರಹ: ಎ.ಆರ್.ಕೃಷ್ಣಮೂರ್ತಿನಿಮಗೆ ಉತ್ತಮ ರೀತಿಯಲ್ಲಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆಯಾ? ಎಂದು ದಾಸನಪುರದಿಂದ ಮಹದೇಶ್ವರ ಕಾಲೇಜು ನಿಲಯಕ್ಕೆ ಹಸ್ತಾಂತರಗೊಂಡ ನಿವಾಸಿಗಳನ್ನು ಶಾಸಕರು ಪ್ರಶ್ನಿಸಿದರು. ಬೆಳಗ್ಗೆ ಸಂತ್ರಸ್ತ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಬೆಳಗ್ಗೆ ಸಂತ್ರಸ್ಥರಿಗೆ ವಿತರಿಸಲಾದ ತಿಂಡಿ ಹಾಗೂ ಮದ್ಯಾಹ್ನ ನೀಡುವ ಆಹಾರ ಪ್ರಮಾಣದ ಬಗ್ಗೆ ಮಾಹಿತಿ ಪಡೆದು, ಉತ್ತಮ ರೀತಿ ಗುಣಮಟ್ಟದ ಆಹಾರ ವಿತರಿಸಿ ಎಂದು ಸೂಚಿಸಿದರು. ಇದೆ ವೇಳೆ ಸಂತ್ರಸ್ತರಿಗಾಗಿ ತಯಾರಿಸಲಾದ ಆಹಾರ, ಪದಾರ್ಥಗಳನ್ನು ಪರಿಶೀಲಿಸಿದರು. ಈ ವೇಳೆ ಕಾಳಜಿ ಕೇಂದ್ರಕ್ಕೆ ತಹಸೀಲ್ದಾರ್ ಮಂಜುಳಾ ಸೇರಿದಂತೆ ವಿವಿಧ ಅಧಿಕಾರಿಗಳು ತೆರಳಿ ಶಾಸಕರ ಜೊತೆ ಸಂತ್ರಸ್ತರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಶಾಸಕರು, ಕಾಳಜಿ ಕೇಂದ್ರದಲ್ಲಿರುವ ಎಲ್ಲರಿಗೂ ಗುಣಮಟ್ಟದ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕೂಡ ಒದಗಿಸಲಾಗಿರುತ್ತದೆ. ನದಿತೀರದ ಕೆಲವು ಗ್ರಾಮಸ್ಥರು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದು ಅವರನ್ನು ಮನವೊಲಿಸಲಾಗುತ್ತಿದೆ ಎಂದರು.