ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ದಿಢೀರ್ ಭೇಟಿ

| Published : Jun 20 2024, 01:02 AM IST

ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ದಿಢೀರ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿ ತಾಲೂಕು ಕಚೇರಿಗೆ ದಿಡೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಬುಧವಾರ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಕಚೇರಿ ಬಾಗಿಲಲ್ಲೇ ಕುಳಿತು ಸಾರ್ವಜನಿಕರ ಕೆಲಸಗಳ ಬಗ್ಗೆ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಈ ಕಚೇರಿಯಲ್ಲಿ ಕೆಲವು ಅಧಿಕಾರಿಗಳಿಗೆ ಶ್ರೀ ಸಾಮಾನ್ಯರ ಸಮಸ್ಯೆಗಳನ್ನು ಕೇಳುವ ವ್ಯವಧಾನವನ್ನೇ ತೋರುತ್ತಿಲ್ಲಾ. ಜನರ ಕೆಲಸಗಳನ್ನು ಸಕಾಲದಲ್ಲಿ ಮಾಡಿ ಕೊಡದೆ ವಿನಾಕಾರಣ ಕಚೇರಿಗೆ ಅಲೆಸುತ್ತಿದ್ದೀರಿ, ಸರ್ಕಾರದ ಸಂಬಳವನ್ನು ತೆಗೆದುಕೊಳ್ಳುವ ನಿಮಗೆ ಬಡವರ ಸಂಕಷ್ಟದ ಅರಿವೇ ಇರುವುದಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾದೀತು ಎಂದೂ ಎಚ್ಚರಿಸಿದರು.

ಆಶಾ ಕಾರ್ಯಕರ್ತೆ ದಲಿತ ಮಹಿಳೆಯೊಬ್ಬರ ಮಗನ ಶಿಕ್ಷಣದ ಸಲುವಾಗಿ ಅಗತ್ಯವಿದ್ದ ಇಂಗ್ಲೀಷ್ ಭಾಷೆಗೆ ತರ್ಜುಮೆಗೊಳಿಸಿದ ಅಫಿಡವಿಟ್ ವಿಳಂಬವಾದ ಬಗ್ಗೆ ಮಹಿಳೆ ತಮಗಾದ ಅನುಭವದ ಬಗ್ಗೆ ಕಣ್ಣೀರು ಸುರಿಸಿದರು. ಇದರಿಂದ ಕೋಪೋದ್ರಿಕ್ತರಾದ ಶಾಸಕರು ಸಂಬಂಧಿಸಿದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಂಡರು. ನೀವು ಮಾಡುವ ಬೇಜವಾಬ್ದಾರಿಯಿಂದ ನಾನು ಮಾತು ಕೇಳುವಂತಾಗಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಈ ಕಚೇರಿಯಲ್ಲಿ ಮಧ್ಯವರ್ತಿಗಳ ಕೆಲಸ ಸರಾಗವಾಗಿ ನಡೀತದೆ. ಹೀಗಾಗಿ ಅವರೆಲ್ಲರೂ ಇಲ್ಲಿಯೇ ಸುತ್ತಾಡಿಕೊಂಡು ಇರ್ತಾರೆ ಎಂಬ ವರದಿ ಇದೆ. ಮಧ್ಯವರ್ತಿ ಗಳ ಕಾರಸ್ಥಾನದಲ್ಲಿ ಈ ಕಚೇರಿಯ ಹಲವಾರು ಮೂಲ ದಾಖಲೆಗಳನ್ನೇ ಅಪಹರಿಸಲಾಗಿದೆ. ನೀವುಗಳೂ ದಾಖಲೆ ನೆಪದಲ್ಲಿ ಮುದ್ಧರನ್ನು ಅಲೆದಾಡಿಸುತ್ತೀರಿ ಎಂದರಲ್ಲದೇ ಹೋಬಳಿ ಕೇಂದ್ರದಲ್ಲಿರುವ ಅಧಿಕಾರಿಗಳನ್ನೂ ತರಾಟೆ ತೆಗೆದುಕೊಂಡರು.ಇನ್ನು, ಪ್ರಕೃತಿ ವಿಕೋಪದ ಹಾನಿಗೆ ಸಂಬಂಧಿಸಿ ಪೂರಕವಾದ ದಾಖಲೆಗಳನ್ನು ಒದಗಿಸದ ಸಿಬ್ಬಂದಿ ಕಾರ್ಯವೈಖರಿಯನ್ನು ಪ್ರಶ್ನಿಸಿದ ಘಟನೆಯೂ ಶಾಸಕರ ಸಮ್ಮುಖದಲ್ಲೇ ನಡೆಯಿತು. ಇದರಿಂದ ಶಾಸಕರು ಕೊಂಚ ಮುಜುಗರಕ್ಕೆ ಒಳಗಾದಂತೆಯೂ ಭಾಸವಾಯ್ತು.

ಈ ಸಂಧರ್ಭದಲ್ಲಿ ಪಪಂ ಸದಸ್ಯ ಸೊಪ್ಪುಗುಡ್ಡೆ ರಾಘವೆಂದ್ರ, ತಳಲೆ ಪ್ರಸಾದ್ ಶೆಟ್ಟಿ, ಶಿರಸ್ತೇದಾರ ಸತ್ಯಮೂರ್ತಿ ಗ್ರಾಮಲೆಕ್ಕಿಗ ಸುಧೀರ್ ಮುಂತಾದವರು ಇದ್ದರು.