ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಗನ ಕಾಲೇಜು ಶುಲ್ಕ ಪಾವತಿಸಲು ತಂದ ಹಣವನ್ನು ಜ್ಯೂಸ್ ಅಂಗಡಿಯಲ್ಲಿ ಅವಸರದಿಂದ ಜ್ಯೂಸ್ ಕುಡಿದು, ನಂತರ ಹಣ ಇಟ್ಟಿದ್ದ ಚೀಲವನ್ನೇ ಅಲ್ಲಿಯೇ ಮರೆತು ಹೋಗಿದ್ದ ತಂದೆಗೆ ಹಣವನ್ನು ಮರಳಿಸುವ ಮೂಲಕ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಮಾನವೀಯತೆ ಮೆರೆದಿದ್ದಾರೆ.ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ಕಿರಾಣಿ ಅಂಗಡಿ ಮಾಲೀಕ ವೆಂಕಟೇಶ ತಮ್ಮ ಮಗನಿಗೆ ಇಲ್ಲಿನ ಶಿರಮಗೊಂಡನಹಳ್ಳಿ ಗ್ರಾಮದ ಅನ್ ಮೋಲ್ ಕಾಲೇಜಿಗೆ ದಾಖಲಿಸಿದ್ದರು. ಅದೇ ಕಾಲೇಜಿನ ಶುಲ್ಕ ಕಟ್ಟಲು ತಂದಿದ್ದ ಹಣವನ್ನು ನಗರದ ಪಿಜೆ ಬಡಾವಣೆಯ ರಸವಂತಿ ಜ್ಯೂಸ್ ಸ್ಟಾಲ್‌ನಲ್ಲಿ ಜ್ಯೂಸ್ ಕುಡಿಯಲೆಂದು ಸೋಮವಾರ ಸಂಜೆ 7.30ರ ವೇಳೆ ಬಂದಿದ್ದ ವೇಳೆ ಹಣ ಇಟ್ಟುಕೊಂಡಿದ್ದ ಚೀಲವನ್ನು ಮರೆತು ಹೋಗಿದ್ದರು.
ಜ್ಯೂಸ್ ಕುಡಿದ ನಂತರ ತಮ್ಮ ಕಾರಿನ ಮೂಲಕ ವೆಂಕಟೇಶ ವಾಪಾಸ್ಸಾಗಿದ್ದರು. ಆದರೆ, 1.20 ಲಕ್ಷ ರು. ಹಣ ಇದ್ದ ಚೀಲವನ್ನು ಜ್ಯೂಸ್ ಸ್ಟಾಲ್ ಟೇಬಲ್ ಮೇಲೆ ಬಿಟ್ಟು ಹೋಗಿದ್ದರು. ಅದೇ ವೇಳೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಜ್ಯೂಸ್ ಕುಡಿಯಲು ಅಲ್ಲಿಗೆ ಬಂದಿದ್ದಾರೆ. ಟೇಬಲ್ ಮೇಲಿದ್ದ ಚೀಲವನ್ನು ಸರಿಸಿ, ಭಾರವಿದ್ದ ಚೀಲ ಯಾರದು ಎಂದು ಕೇಳಿ, ತೆಗೆದು ನೋಡಿದ್ದಾರೆ. ಅದರಲ್ಲಿ ಹಣದ ಬಂಡಲ್ ಇರುವುದು ಗಮನಕ್ಕೆ ಬಂದಿದೆ. ಎಲ್ಲರೂ ಅದು ತಮ್ಮದಲ್ಲ ಎಂದು ಹೇಳಿದ್ದಾರೆ. ತಕ್ಷಣ ಜ್ಯೂಸ್ ಸ್ಟಾಲ್ ಮಾಲೀಕ, ಅಲ್ಲಿದ್ದ ಜನರ ಎದುರಿನಲ್ಲೇ ಅಷ್ಟೂ ಹಣವನ್ನು ಶಾಸಕ ಬಸವಂತಪ್ಪ ಎಣಿಸಿದಾಗ 1.20 ಲಕ್ಷ ಇರುವುದು ಕಂಡು ಬಂದಿದೆ.ಅತ್ತ ಕಾಲೇಜಿಗೆ ಹೊರಟಿದ್ದ ರಾಣೆಬೆನ್ನೂರಿನ ವೆಂಕಟೇಶ ಮಾರ್ಗ ಮಧ್ಯೆ ತಮ್ಮ ಹಣದ ಚೀಲ ಇಲ್ಲದ್ದನ್ನು ನೋಡಿ, ಗಾಬರಿಯಾಗಿದ್ದಾರೆ. ತಕ್ಷಣ ನೆನಪಾಗಿದ್ದು ಕಾರಿನಿಂದ ಇಳಿದಾಗ ಹಣದ ಬ್ಯಾಗನ್ನು ಜ್ಯೂಸ್ ಸ್ಟಾಲ್ ಗೆ ತಗೆದುಕೊಂಡು ಹೋಗಿ, ನಂತರ ಹಣ ಕೊಟ್ಟು ಬರಿಗೈನಲ್ಲಿ ವಾಪಾಸ್ಸಾಗಿದ್ದು ನೆನಪಾಗಿದೆ. ಇತ್ತ ಶಾಸಕ ಕೆ.ಎಸ್.ಬಸವಂತಪ್ಪ ಹಣದ ವಾರಸುದಾರರು ಯಾರೆಂದು ಗೊತ್ತಾಗುವವರೆಗೂ ಹಣ ನನ್ನಲ್ಲಿ ಇರುತ್ತದೆ. ಅದನ್ನು ಕಳೆದುಕೊಂಡವರು ಬಂದರೆ ತಮಗೆ ಫೋನ್ ಮಾಡುವಂತೆ ಹೇಳಿ, ಪದ್ದು ಕಾಫಿ ಬಾರ್ ಬಳಿ ತೆರಳಿದರು.
ಗೂಗಲ್‌ನಲ್ಲಿ ಜ್ಯೂಸ್ ಸ್ಟಾಲ್ ಮಾಲೀಕರ ಮೊಬೈಲ್ ಸಂಖ್ಯೆ ಹುಡುಕಿದ ರಾಣೆಬೆನ್ನೂರಿನ ವೆಂಕಟೇಶ ಹಣ ವಿಚಾರ ಪ್ರಸ್ತಾಪಿಸಿದಾಗ ಹಣದ ಚೀಲ ಸಿಕ್ಕಿದೆ ಎಂದು ಮಾಲೀಕ ಹೇಳಿದ್ದಾರೆ.ವೆಂಕಟೇಶ ಜ್ಯೂಸ್ ಸ್ಟಾಲ್ ಬಳಿ ಬರುತ್ತಿದ್ದಂತೆ ಮಾಲೀಕರು ಶಾಸಕ ಬಸವಂತಪ್ಪಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪದ್ದು ಕಾಫಿ ಬಾರ್ ಬಳಿ ಇದ್ದ ಶಾಸಕರು ರಸವಂತಿ ಜ್ಯೂಸ್ ಸ್ಟಾಲ್‌ಗೆ ಬಂದು, ಚೀಲದಲ್ಲಿದ್ದ ಹಣ ಎಷ್ಟು ಎಂಬುದಾಗಿ ಪ್ರಶ್ನಿಸಿದ್ದಾರೆ. ಆಗ ವೆಂಕಟೇಶ 1.30 ಲಕ್ಷ ಎಂಬುದಾಗಿ ಸುಳ್ಳು ಹೇಳಿದ್ದಾರೆ.
ಅದಕ್ಕೆ ಶಾಸಕ ಬಸವಂತಪ್ಪ, ಹಾಗಿದ್ದರೆ ಆ ಹಣ ನಿನ್ನದಲ್ಲ. ಚೀಲದಲ್ಲಿ ಹಣ ಎಷ್ಟು ಇತ್ತೆಂಬುದನ್ನು ಎಲ್ಲರ ಮುಂದೆಯೇ ಎಣಿಸಿದ್ದೇನೆ. ಹಾಗಾಗಿ ಈ ಹಣ ನಿನ್ನದಲ್ಲ. ಬೇರೆ ಯಾರದ್ದೋ ಇರಬಹುದು ಎಂದು ಬಸವಂತಪ್ಪ ಹೇಳಿದ್ದಾರೆ. ಆಗ ಇಲ್ಲ ಸರ್, ₹1.20 ಲಕ್ಷ ಇತ್ತು. ನನ್ನ ಮಗ ಅನ್‌ಮೋಲ್ ವಸತಿ ಕಾಲೇಜಿನಲ್ಲಿ ಓದುತ್ತಿದ್ದು, ಶುಲ್ಕ ಕಟ್ಟಲು ಹಣ ತಂದಿದ್ದೆನೆ ಎಂದು ವೆಂಕಟೇಶ ಹೇಳಿದ್ದಾರೆ. ಆಗ ಶಾಸಕ ಬಸವಂತಪ್ಪ ಅಸಮಾದಾನ ವ್ಯಕ್ತಪಡಿಸಿದ್ದಾರೆ. ನೀನು ಕಳೆದುಕೊಂಡಿದ್ದು 1.20 ಲಕ್ಷ ಅಂತಾ ಗೊತ್ತಿದ್ದರೂ, 1.30ಲಕ್ಷ ಅಂತಾ ಯಾಕೆ ಹೇಳಿದೆ? ನಿನ್ನಂಗೆಯೇ ಬೇರೆ ಯಾರೋ ಹಣ ಕಳೆದುಕೊಂಡಿರಬಹುದು ಅಥವಾ ನೀನು ಹೇ ಳುವ ಮಾತು ಕೇಳಿದರೆ ಇಲ್ಲಿದ್ದವರ ನಾನೇ 10 ಸಾವಿರ ತೆಗೆದುಕೊಂಡಿದ್ದೇನೆಂಬ ಅರ್ಥ ಬರುವುದಿಲ್ಲವೇ ಎಂದು ವೆಂಕಟೇಶಗೆ ನೀತಿ ಬೋಧಿಸಿ, ಹಣ ಮರಳಿಸಿದ್ದಾರೆ.