ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಪಟ್ಟಣದ ಬಳೇಪೇಟೆಯಿಂದ ವೈ.ಕೆ. ಮೋಳೆಗೆ ಹೋಗುವ ರಸ್ತೆ, ಗುಂಬಳ್ಳಿ ಮಾರ್ಗವಾಗಿ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಂಗನಾಥನಪುರ ರಸ್ತೆ ಅಭಿವೃದ್ಧಿ ಹಾಗೂ ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕಳೆದ ಹಲವು ವರ್ಷಗಳಿಂದಲೂ ವೈ.ಕೆ.ಮೋಳೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಫೇಸ್-೫ ರ ಅಡಿಯಲ್ಲಿ ಯಳಂದೂರು ಪಟ್ಟಣದ ಬಳೇಪೇಟೆಯಿಂದ ಬಿಳಿಗಿರಿರಂಗನೆಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ೨೦ ಕೋಟಿ ರು. ಹಣ ಬಿಡುಗಡೆಯಾಗಿತ್ತು. ಇದನ್ನು ಮಾರ್ಪಡಿಸಿ ಬಳೇಪೇಟೆಯಿಂದ ವೈ.ಕೆ.ಮೋಳೆ ಗ್ರಾಮದ ಮಾರ್ಗವಾಗಿ ಚಂಗಚಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ೨ ಕಿ.ಮಿ. ರಸ್ತೆಗೆ ೭ ಕೋಟಿ ರು. ಇದರಲ್ಲಿ ೭೦೦ ಮೀಟರ್ ಗ್ರಾಮದೊಳಗೆ ರಸ್ತೆ ಬದಿ ಚರಂಡಿ ನಿರ್ಮಾಣ ಹಾಗೂ ಪಟ್ಟಣದ ಸುವರ್ಣಾವತಿ ಸೇತುವೆಯಿಂದ ಬಿಳಿಗಿರಿರಂಗನಬೆಟ್ಟಕ್ಕೆ ಗುಂಬಳ್ಳಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ೫.೫೦ ಕಿ.ಮಿ ರಸ್ತೆಗೆ ೧೩ ಕೋಟಿ. ರು.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿತ್ತು. ಇದರ ನಿರ್ಮಾಣಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ೭೪ ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಈ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ. ನನ್ನ ಅವಧಿಯಲ್ಲಿ ಕೊಮಾರನಪುರ ಗ್ರಾಮದ ರಸ್ತೆ ಅಭಿವೃದ್ಧಿಗೆ ೨ ಕೋಟಿ ರು. ಬಿಡುಗಡೆಯಾಗಿ ವಾಪಸ್ಸಾಗಿದ್ದು ಇದನ್ನು ಮತ್ತೆ ಮರು ಮಂಜೂರು ಮಾಡಿಸಲಾಗಿದ್ದು ಆದಷ್ಟು ಬೇಗ ಈ ಕಾಮಗಾರಿಯನ್ನೂ ಆರಂಭಿಸಲಾಗುವುದು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.ಬಿಳಿಗಿರಿರಂಗನಬೆಟ್ಟದ ಮೆಟ್ಟಿಲು ನಿರ್ಮಾಣದ ಹಣವೂ ಕೂಡ ವಾಪಸ್ಸಾಗಿದ್ದು ಇದನ್ನು ಮತ್ತೆ ಮರು ಮಂಜೂರು ಮಾಡಿಸಲಾಗಿದ್ದು ಈಗಾಗಲೇ ರಥದ ಬೀದಿಯ ರಸ್ತೆ ಕಾಮಗಾರಿ ಮುಗಿದಿದ್ದು ಮೆಟ್ಟಿಲು ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು. ಅಲ್ಲದೆ ಇಲ್ಲಿಗೆ ಸುಸಜ್ಜಿತ ಬಸ್ ನಿಲ್ದಾಣ, ಹೈ ಮಾಸ್ಟ್ ದೀಪ, ಶುದ್ಧ ಕುಡಿಯುವ ನೀರಿನ ಘಟಕ, ದಾಸೋಹ ಭವನ ನಿರ್ಮಾಣ, ಕಮರಿ ಅಭಿವೃದ್ಧಿಗೂ ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುವುದು ಎಂದರು. ಅಂಬಳೆ, ದುಗ್ಗಹಟ್ಟಿ, ಗುಂಬಳ್ಳಿ, ಯರಂಗಬಳ್ಳಿ ಗ್ರಾಪಂ ಅಧ್ಯಕ್ಷರಾದ ನಂಜುಂಡಸ್ವಾಮಿ, ಗಾಯತ್ರಿ, ಮೀನಾ, ಭಾಗ್ಯಮ್ಮ ಸದಸ್ಯರಾದ ಶಾಂತಮ್ಮ, ಮಹೇಶ, ಸಿದ್ದರಾಜು, ಮಹದೇವಮ್ಮ, ಮಲ್ಲು, ಶೋಭಾ, ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ಪ್ರಭುಪ್ರಸಾದ್, ಕಂದಹಳ್ಳಿ ನಂಜುಂಡಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಜೆಇ ಸುರೇಂದ್ರ, ಗುತ್ತಿಗೆದಾರರಾದ ಕಾರ್ತಿಕ್, ನಾಗರಾಜು, ನಿರಂಜನ್ ಸೇರಿದಂತೆ ಅನೇಕರು ಹಾಜರಿದ್ದರು.