ಕನ್ನಡಪ್ರಭ ವಾರ್ತೆ ಮುಧೋಳತಾಲೂಕಿನ ಸುಕ್ಷೇತ್ರ ಉತ್ತೂರ ಸ್ವಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಾಗೂ ತಮಗೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ನೀಡಿದ ಶಿಕ್ಷಕರನ್ನು ಸ್ಮರಿಸಿಕೊಳ್ಳುವ ಸದುದ್ದೇಶದಿಂದ ಮುಧೋಳ ಮೀಸಲು ಮತಕ್ಷೇತ್ರದ ಶಾಸಕ, ಮಾಜಿ ಸಚಿವ ಹಾಗೂ ಕರ್ನಾಟಕ ಸರ್ಕಾರದ ವಿಧಾನ ಮಂಡಲದ (ವಿಧಾನಸಭೆ) ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪೂರ ಅವರು ತಮ್ಮ 65ನೇ ಹುಟ್ಟುಹಬ್ಬವನ್ನು ಇದೇ ಶಾಲಾ ಆವರಣದಲ್ಲಿ ಸೆ.16ರ ಬೆಳಗ್ಗೆ 11.30ಕ್ಕೆ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮುಧೋಳ

ತಾಲೂಕಿನ ಸುಕ್ಷೇತ್ರ ಉತ್ತೂರ ಸ್ವಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಾಗೂ ತಮಗೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ನೀಡಿದ ಶಿಕ್ಷಕರನ್ನು ಸ್ಮರಿಸಿಕೊಳ್ಳುವ ಸದುದ್ದೇಶದಿಂದ ಮುಧೋಳ ಮೀಸಲು ಮತಕ್ಷೇತ್ರದ ಶಾಸಕ, ಮಾಜಿ ಸಚಿವ ಹಾಗೂ ಕರ್ನಾಟಕ ಸರ್ಕಾರದ ವಿಧಾನ ಮಂಡಲದ (ವಿಧಾನಸಭೆ) ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪೂರ ಅವರು ತಮ್ಮ 65ನೇ ಹುಟ್ಟುಹಬ್ಬವನ್ನು ಇದೇ ಶಾಲಾ ಆವರಣದಲ್ಲಿ ಸೆ.16ರ ಬೆಳಗ್ಗೆ 11.30ಕ್ಕೆ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಉತ್ತೂರ ಎಂದಾಕ್ಷಣ ನೆನಪಿನಲ್ಲಿ ಅಚ್ಚಳಿಯದೇ ಉಳಿಯುವ ಒಂದೇ ಹೆಸರು ಕಾಯಕಯೋಗಿ ಬಸವಣ್ಣನವರ ಕಾಯಕ ತತ್ವ ಪರಿಪಾಲಕ ಲಿಂ.ಬಸಯ್ಯ ಅಜ್ಜನವರು. ಜನರಿಗೆ ಸಿಹಿ ಹಂಚುವ ಸಕ್ಕರೆಯ ನಾಡು, ದೇಶದ ಗಡಿ ಕಾಯಲು ವಿಶಿಷ್ಟ ಕೊಡುಗೆ ಕೊಟ್ಟ ಮುಧೋಳ ನಗರದ ನೈಋತ್ಯ ದಿಕ್ಕಿಗೆ ಹಚ್ಚ ಹಸುರಿನಿಂದ ಕಂಗೊಳಿಸುವ ಪುಣ್ಯ ತಾಣ, ಪ್ರಾಚೀನ ಕಾಲದಿಂದಲೇ ಕಲೆ, ಕಲಾವಿದರು, ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಹಿತ್ಯ, ಕ್ರೀಡೆ, ಕೃಷಿ ಸೇರಿದಂತೆ ಸರ್ವ ರಂಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಹಾಗೂ ಉತ್ತಮರು ವಾಸಿಸುವ ದಿವ್ಯ ಕ್ಷೇತ್ರವೇ ಈ ಉತ್ತೂರು ಗ್ರಾಮ.

ಇಂತಹ ದಿವ್ಯ ಕ್ಷೇತ್ರ ಉತ್ತೂರದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿಯೇ ಶಿಕ್ಷಣಕ್ಕೆ ಹೆಸರುವಾಸಿಯಾದದು ಇತಿಹಾಸದ ಮೈಲಿಗಲ್ಲು. ಇಲ್ಲಿ ಮರಾಠಿ ಶಾಲೆಗೆ ಭಾರಿ ಬೇಡಿಕೆ ಇತ್ತು. ನಂತರದ 1917ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಆರಂಭವಾಯಿತು.

ಇಂದಿಗೆ 104 ವರ್ಷಗಳು ಕಳೆದಿವೆ. 104 ವರ್ಷಗಳ ಈ ಶಾಲಾ ಇತಿಹಾಸದಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಬಾಳನ್ನು ಬೆಳಕಾಗಿಸಿಕೊಂಡಿದ್ದಾರೆ. ಈ ಶಾಲೆಯ ಸುತ್ತಮುತ್ತ ಗ್ರಾಮಗಳಾದ ಜಾಲಿಬೇರಿ, ರಂಜಣಗಿ, ಚೆನ್ನಾಳ ಮತ್ತು ಒಂಟಗೋಡಿ ಗ್ರಾಮದವರು ಇಲ್ಲಿಯೇ ಶಿಕ್ಷಣ ಪಡೆದಿದ್ದಾರೆ.

ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳ ಮತ್ತೊಂದು ಅಮೋಘ ಸಾಧನೆ ಎಂದರೆ ಭಾರತೀಯ ಸೇನೆಗೆ ಸುಮಾರು 35ರಿಂದ 40 ವಿದ್ಯಾರ್ಥಿಗಳು ಸೇರಿ ದೇಶ ಸೇವೆಗೆ ಸದಾ ಕಂಕಣ ಬದ್ದರಾಗಿದ್ದಾರೆ

ಪ್ರಸ್ತುತ ಉತ್ತೂರ ಗ್ರಾಮವೊಂದರಲ್ಲಿ 25 ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಕೂಡಾ ತಮ್ಮ ಚಾಪನ್ನು ಮೂಡಿಸಿದ್ದಾರೆ. ಉತ್ತೂರಿನ ಹೆಮ್ಮೆಯ ಕುವರರಾದ ರಾಮಪ್ಪ ಬಾಲಪ್ಪ ತಿಮ್ಮಾಪೂರ ಅವರು ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಾಗಿ, ವಿವಿಧ ಇಲಾಖೆಗಳ ಸಚಿವರಾಗಿ ಜನ ಮಣ್ಣನೆ ಕಾರ್ಯಕ್ಕೆ ಹೆಸರುವಾಸಿ ಆಗಿದ್ದಾರೆ, ಇನ್ನೊರ್ವ ವಿದ್ಯಾರ್ಥಿನಿ ಶಾಸಕ ತಿಮ್ಮಾಪೂರ ಅವರ ಸಹೋದರಿ ಕವಿತಾ ಬಾ. ತಿಮ್ಮಾಪೂರ ಅವರು ಜಿಲ್ಲಾ ಪಂಚಾಯಿತಿ ಸದಸ್ಯರು ಆಗಿದ್ದರು.

ಕ್ರೀಡಾ ಕ್ಷೇತ್ರದಲ್ಲಿ ಸಹ ಈ ಶಾಲೆಯ ಶಿಷ್ಯವೃಂದ ಖೋ ಖೋ ಮಹಿಳಾ ವಿಭಾಗದಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ, ವೈಯಕ್ತಿಕ ಕ್ರೀಡೆಯಲ್ಲಿ ಸಹ ದಾಖಲೆ ಮಾಡಿದ್ದಾರೆ.

ಉತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಶಾಸಕ ಆರ್.ಬಿ.ತಿಮ್ಮಾಪೂರ ಅವರು ಸರ್ಕಾರದಿಂದ ವಿಶೇಷ ಅನುದಾನ ತಂದು ನೂತನ ಹೈಟೆಕ್ ಕಟ್ಟಡವನ್ನು ನಿರ್ಮಿಸುವ ಮೂಲಕ ಶಾಲೆ ಋಣ ತೀರಿಸಿದ್ದಾರೆ.