ಸಾರಾಂಶ
ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿಯ ಬೆಂಡೆಕೆರೆ, ಹೊಸೂರು ಮತ್ತು ಅರೇಹಳ್ಳಿ ಗ್ರಾಮಗಳ ಸುಮಾರು ೨೬೦ ಕ್ಕೂ ಹೆಚ್ಚು ಮನೆಗಳಿಗೆ ಸುಮಾರು ೧೩೦ ಲಕ್ಷ ರು. ವೆಚ್ಚದಲ್ಲಿ ಕುಡಿಯುವ ನೀರನ್ನು ಒದಗಿಸುವ ಜಲಜೀವನ್ ಯೋಜನೆಗೆ ಶಾಸಕ ಎಂ.ಟಿ. ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ತಾಲೂಕಿನ ದಬ್ಬೇಘಟ್ಟ ಹೋಬಳಿಯ ಬೆಂಡೆಕೆರೆ ಗ್ರಾಮದಲ್ಲಿ ೬೦ ಲಕ್ಷ ರು. ವೆಚ್ಚದಲ್ಲಿ ೧೧೫ ಮನೆಗಳಿಗೆ ಕೊಳಾಯಿ ಸಂಪರ್ಕ ಹಾಗೂ ನೀರಿನ ಟ್ಯಾಂಕ್ ನಿರ್ಮಾಣ, ಅರೇಹಳ್ಳಿ ಮತ್ತು ಹೊಸೂರು ಗ್ರಾಮದಲ್ಲಿ ೭೦ ಲಕ್ಷ ವೆಚ್ಚದಲ್ಲಿ ಸುಮಾರು ೧೪೫ ಮನೆಗಳಿಗೆ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ನಲ್ಲಿ ಹಾಕುವ ಕಾಮಗಾರಿಗೆ ಮತ್ತು ಎರಡು ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಎಂ.ಟಿ. ಕೃಷ್ಣಪ್ಪ, ಕಳೆದ ವರ್ಷ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿ ಬೋರ್‌ವೆಲ್‌ಗಳಲ್ಲಿ ನೀರು ತುಂಬಿದ್ದವು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಅಂತರ್ಜಲ ಕಡಿಮೆಯಾಗಿ ಬೋರ್‌ವೆಲ್‌ನಲ್ಲಿಯೂ ನೀರು ಕಡಿಮೆಯಾಗುತ್ತಿದೆ. ಆದ್ದರಿಂದ ಜನರು ನೀರನ್ನು ಮಿತವಾಗಿ ಬಳಸಬೇಕು. ಬೇಸಿಗೆ ಕಾಲದಲ್ಲಿ ಜನರು ಕುಡಿಯುವ ನೀರಿನ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಸಾರ್ವಜನಿಕರು ತಮ್ಮ ಗ್ರಾಮಕ್ಕೆ ಉಪಯುಕ್ತವಾಗಿರುವ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡಿಸಿಕೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಹ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಗ್ರಾಮಾಂತರ ಪ್ರದೇಶದ ಜನರ ಮನಸ್ಸು ಗೆಲ್ಲಬೇಕು ಎಂದು ಹೇಳಿದರು.ಭೂಮಿ ಪೂಜೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ಸಹಾಯಕ ಎಂಜಿನಿಯರ್ ಟಿ.ಬಿ. ರವಿಕುಮಾರ್, ಗುತ್ತಿಗೆದಾರರಾದ ತ್ಯಾಗರಾಜು, ಪುನಿತ್, ಗ್ರಾಮ ಪಂಚಾಯ್ತಿ ಸದಸ್ಯ ಮಂಜು. ಮಾಜಿ ಸದಸ್ಯ ಸತೀಶ್, ಮುಖಂಡರಾದ ಮಧು, ಬಸವರಾಜು, ಬೋರೇಗೌಡ, ಶೇಷಗಿರಿ, ಪುನೀತ್, ಪ್ರಕಾಶ್, ಹಿರಿಯಣ್ಣ, ಡ್ರೈವರ್ ರಮೇಶ್, ಗೋವಿಂದಪ್ಪ ಸೇರಿದಂತೆ ಹಲವಾರು ಮುಖಂಡರು ಇದ್ದರು.