ರೋಣ: ರೋಣ ಶಾಸಕ ಜಿ.ಎಸ್. ಪಾಟೀಲ ಮಂತ್ರಿಯಾಗಲು ಎಲ್ಲ ರೀತಿಯ ಅರ್ಹತೆ ಹೊಂದಿದ್ದಾರೆ. ಹೈಕಮಾಂಡ್ ಈ ಬಾರಿ ಜಿ.ಎಸ್. ಪಾಟೀಲರಿಗ ಸಚಿವ ಸ್ಥಾನ ನೀಡಬೇಕು ಎಂದು ಕುದರಿಮೋತಿ- ಗಜೇಂದ್ರಗಡ ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.
ಶನಿವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಕಾಲೇಜಿನ ಆವರಣದಲ್ಲಿ ಮಾತೋಶ್ರೀ ಬಸಮ್ಮ ಎಸ್. ಪಾಟೀಲ ಅವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿ.ಎಸ್. ಪಾಟೀಲ ಅವರು ಹಿರಿಯ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಚಿವ ಸಂಪುಟ ವಿಸ್ತರಣೆ ವೇಳೆ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.ತಾಯಿ ಋಣ ಅಮೂಲ್ಯವಾದ ಮುತ್ತು, ವಜ್ರ, ರತ್ನಕ್ಕಿಂತ ಮಿಗಿಲಾದುದು. ತಾಯಿಯನ್ನು ಪೂಜಿಸುವ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆರುತ್ತಾನೆ. ತಾಯಿಯೇ ಮೊದಲ ದೇವರಾಗಿದ್ದಾಳೆ. ತಾಯಿಯ ಮನಸ್ಸನ್ನು ನೋಯಿಸದೇ ಪೂಜಿಸುವ ಸಂಸ್ಕಾರ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಸಮಾಜಕ್ಕೆ ಒಳಿತಾಗುವುದು. ಈ ದಿಶೆಯಲ್ಲಿ ಮಾತೋಶ್ರೀ ಬಸಮ್ಮ ಪಾಟೀಲರ ಪುತ್ರರು ತಾಯಿಯ ಪುಣ್ಯಸ್ಮರಣೆ ನಿಮಿತ್ತ ಕಳೆದ 22 ವರ್ಷಗಳಿಂದ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಆರೋಗ್ಯ ತಪಾಸಣೆ, ರೈತಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ ಅನೇಕ ಸಾಮಾಜಿಕ ಹಿತ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದ್ದು, ಪಾಟೀಲ ಮನೆತನ ಸಾಮಾಜಿಮುಖಿ ಕಾರ್ಯ ಶ್ಲಾಘನೀಯ.ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಮಕ್ಕಳಿಗೆ ಸಮಾಜದ ಸೇವೆ ಮಾಡುವುದು ಹೇಗೆ ಎಂಬ ಸಂಸ್ಕಾರವನ್ನು ಕಲಿಸಬೇಕು ಎಂದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಸಮಾಜದಲ್ಲಿ ಹಿರಿಯರಿಗೆ ಸಲ್ಲಬೇಕಾದ ಗೌರವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ಹಿರಿಯರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಕಾರ್ಯಕರ್ತರ ಆಶೀರ್ವಾದವೇ ನನಗೆ ಶಕ್ತಿ. ಸಮಾಜ ಸೇವೆಗೆ ಸ್ಫೂರ್ತಿಯಾಗಿದೆ. 3500 ವಿದ್ಯಾರ್ಥಿಗಳಿಗೆ ಖನಿಜ ಅಭಿವೃದ್ಧಿ ನಿಗಮದಿಂದ ಉಚಿತ ಸ್ಕೂಲ್ ಬ್ಯಾಗ ವಿತರಿಸಲಾಗಿದೆ. ಅಲ್ಲದೇ ನಮ್ಮ ಮನೆತನವೇ ಸಮಾಜಮುಖಿ ಕಾರ್ಯಕ್ಕೆ ಮೀಸಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಮಾಜಿ ಸಂಸದ ಆರ್.ಎಸ್. ಪಾಟೀಲ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುಲಗಂಜಿ ಮಠದ ಗುರುಪಾದ ಶ್ರೀ, ಡಾ. ಶಿವಕುಮಾರ ಸ್ವಾಮೀಜಿ, ಡಾ. ಬಸವರಾಜ ದೇವರು, ಹಜರತ್ ಸೈಯದ ಸುಲೆಮಾನ ಶಾವಲಿ ಅಜ್ಜನವರು, ರಾಜೇಂದ್ರ ಮತ್ಯಾನವರು, ಯಚ್ಚರೇಶ್ವರ ಸ್ವಾಮೀಜಿ, ಚಂದ್ರಶೇಖರಯ್ಯಸ್ವಾಮಿ, ಮುರುಳಸಿದ್ದೇಶ್ವರ ಸ್ವಾಮೀಜಿ, ಗದಿಗೆಪ್ಪಜ್ಜಸ್ವಾಮಿ, ನಿವೃತ್ತ ಮುಖ್ಯಕಾರ್ಯದರ್ಶಿ ಬಿ.ಎಸ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಐ.ಎಸ್. ಪಾಟೀಲ, ದೊಡ್ಡನಗೌಡ ಎಸ್. ಪಾಟೀಲ, ಟಿ. ಈಶ್ವರ, ರಾಮಕೃಷ್ಣ ದೊಡ್ಡಮನಿ, ರಾಜೇಂದ್ರ ಪಾಟೀಲ, ಅಕ್ಷಯ ಪಾಟೀಲ, ಮಿಥುನ ಪಾಟೀಲ, ವೀರಣ್ಣ ಶೆಟ್ಟರ, ಪ್ರಭು ಮೇಟಿ, ಮಾಜಿ ಶಾಸಕ ಅಕ್ಕಿ, ಮಲ್ಲಣ್ಣ ಕತ್ತೆಬೆನ್ನೂರ, ಶಂಕರಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು. ವೀರಭದ್ರಗೌಡ ಪಾಟೀಲ ವಂದಿಸಿದರು.