ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಹಾಲಹಳ್ಳಿ ಸಂಗಮ ಪ್ರತಿಷ್ಠಾನ, ಎಚ್.ಎಸ್.ಮಹದೇವ ಪ್ರಸಾದ್ ಟ್ರಸ್ಟ್ ಹಾಗೂ ರೌಂಡ್ ಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕ್ಷೇತ್ರದ ಹತ್ತು ಸರ್ಕಾರಿ ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದೆ ಎಂದು ಶಾಸಕ ಎಚ್.ಎಎಂ ಗಣೇಶ್ ಪ್ರಸಾದ್ ಹೇಳಿದರು.ವಿಧಾನಸಭಾ ಕ್ಷೇತ್ರದ ನಿಟ್ರೆ, ಕೋಟೆಕೆರೆ, ಗರಗನಹಳ್ಳಿ, ಕಬ್ಬಹಳ್ಳಿ, ಬನ್ನಿತಾಳಪುರ, ಗುಂಡ್ಲುಪೇಟೆ ದೊಡ್ಡಹುಂಡಿ ಭೋಗಪ್ಪ, ಭೀಮನಬೀಡು, ಬಾಚಹಳ್ಳಿ ಸೇರಿದಂತೆ ಹತ್ತು ಸರ್ಕಾರಿ ಪ್ರೌಢ ಶಾಲೆಗಳಿಗೆ ೫೫ ಸಾವಿರ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಉಪಕರಣ ನೀಡಲಾಗಿದೆ ಎಂದರು. ಗ್ರಾಮಾಂತರ ಪ್ರದೇಶದ ಮಕ್ಕಳು ಸ್ಮಾರ್ಟ್ ಕ್ಲಾಸಲ್ಲಿ ಹೆಚ್ಚು ಮಾಹಿತಿ ಪಡೆದರೆ ಶೈಕ್ಷಣಿಕ ಗುಣಮಟ್ಟ ವೃದ್ಧಿಯಾಗಲಿದೆ ಜೊತೆಗೆ ಮಕ್ಕಳನ್ನುಸ್ಮಾರ್ಟ್ ಕ್ಲಾಸ್ ಆಕರ್ಷಿಸಲಿದೆ. ಸಂಗಮ ಪ್ರತಿಷ್ಠಾನ, ಎಚ್.ಎಸ್.ಮಹದೇವಪ್ರಸಾದ್ ಪೌಂಡೇಶನ್ ಜೊತೆಗೆ ರೌಂಡ್ ಟೇಬಲ್ ಟ್ರಸ್ಟ್ ಜಂಟಿಯಾಗಿ ಈ ವ್ಯವಸ್ಥೆ ಮಾಡಿವೆ ಎಂದರು. ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸಿ ಕೊಡಬೇಕು ಎಂಬ ಸದುದ್ದೇಶದಿಂದ 10 ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರಂಭಿಕವಾಗಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗಿದೆ ಎಂದರು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಸಲುವಾಗಿ ಪ್ರಾರಂಭಿಸಿರುವ ಸ್ಮಾರ್ಟ್ ಕ್ಲಾಸ್ ಬಳಸಿಕೊಂಡು ವಿದ್ಯಾರ್ಥಿಗಳು ಹೆಚ್ಚು ಬುದ್ದಿವಂತರಾಗುವ ಜೊತೆಗೆ ಹೆಚ್ಚಿನ ಅಂಕಗಳಿಕೆಗೂ ಕಾರಣವಾಗಬೇಕಿದೆ ಎಂದು ಸಲಹೆ ನೀಡಿದರು. ಪ್ರತ್ಯೇಕವಾಗಿ ನಡೆದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ, ಯುವ ಮುಖಂಡ ಕಬ್ಬಹಳ್ಳಿ ದೀಪು,ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಆಪ್ತ ಸ್ವರೂಪ್,41 ಕ್ಲಬ್ ಆಫ್ ಇಂಡಿಯಾ ಅಧ್ಯಕ್ಷ ರಾಜರಾಂಗೌಡ , 277 ರ ಅಧ್ಯಕ್ಷ ಅರುಣ್, ಮೈಸೂರು ಎಲೈಟ್ ರೌಂಡ್ ಟೇಬಲ್ 256 ಅಧ್ಯಕ್ಷ ಜಯ ಚೋಪ್ರಾ, ರವಿಕುಮಾರ್, ದಿನೇಶ್ ಸೇರಿದಂತೆ ಆಯಾಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.