ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೈಂದೂರುಜನಪ್ರತಿನಿಧಿಗಳು ತಮ್ಮ ಹುಟ್ಟುಹಬ್ಬದಂದು ದೇವರ ಪೂಜೆ, ಊಟ ಇತ್ಯಾದಿಗಳಿಗೆ ಸಾಕಷ್ಟು ಹಣ ಖರ್ಚು ಮಾಡುವುದಿದೆ. ಆದರೆ ಇಲ್ಲೊಬ್ಬ ಶಾಸಕರಿದ್ದಾರೆ, ಅವರ ಹುಟ್ಟುಹಬ್ಬವನ್ನು ಅವರಿಗಿಂತ ಅವರ ಅಭಿಮಾನಿಗಳೇ ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆಚರಿಸಿ, ಇತರರಿಗೆ ಮಾದರಿಯಾಗಿದ್ದಾರೆ.
ಬರಿಗಾಲ ಶಾಸಕ ಬೈಂದೂರಿನ ಗುರುರಾಜ್ ಗಂಟಿಹೊಳೆ ಅವರ 43ನೇ ಹುಟ್ಟುಹಬ್ಬವನ್ನು ಭಾನುವಾರ ಅವರ ಅಭಿಮಾನಿಗಳು ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಗಂಟಿಹೊಳೆ ಅವರು ಮಾತ್ರ ಎಂದಿನಂತೆ ತಮ್ಮ ಕ್ಷೇತ್ರದ ಅಭಿವೃದ್ದಿ ಕಾರ್ಯಗಳ ವೀಕ್ಷಣೆಯಲ್ಲಿ ವ್ಯಸ್ತರಾಗಿದ್ದರು.ಉಪ್ಪುಂದ ಗಂಟಿಹೊಳೆ ಅಭಿಮಾನಿ ಬಳಗದ ಕಾರ್ಯಕರ್ತರು ಕುಂದಾಪುರದ ಚೈತನ್ಯ ವೃದ್ಧಾಶ್ರಮದ ನಿವಾಸಿಗಳಿಗೆ ಊಟದ ವ್ಯವಸ್ಥೆ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿ ತಮ್ಮ ಶಾಸಕ ಹುಟ್ಟುಹಬ್ಬ ಆಚರಿಸಿದರು.
ಕೇರಾಡಿ ಗ್ರಾಮದ ನೂರಾರು ಅಭಿಮಾನಿಗಳು ಕುಂದಾಪುರ ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಮಾಡಿ ತಮ್ಮ ನಾಯಕನಿಗೆ ಶುಭ ಕೋರಿದರು.ಸಿದ್ದಾಪುರ, ಉಪ್ಪುಂದ, ವಂಡ್ಸೆ, ಬಿಜೂರು ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಶಾಸಕರ ಜನ್ಮದಿನದ ನಿಮಿತ್ತ ನೂರಾರು ಉಪಯುಕ್ತ ಗಿಡಗಳನ್ನು ಸಮೃದ್ಧ ಹಸಿರು ಕಾರ್ಯಕ್ರಮ ಆಯೋಜಿಸಿದ್ದರು.
ಎಳಜಿತ್ ಗ್ರಾಮದ ಪಕ್ಷದ ಕಾರ್ಯಕರ್ತರು ಸ್ಥಳೀಯ ರಾಮಕೃಷ್ಣ ಕುಟೀರಕ್ಕೆ ಅತ್ಯುಪಯುಕ್ತ ಸಾಹಿತ್ಯ ಕೃತಿಗಳನ್ನು ಕೊಡುಗೆಯಾಗಿ ನೀಡಿ ತಮ್ಮ ಶಾಸಕರ ಮೇಲಿನ ಅಭಿಮಾನ ತೋರಿಸಿದರು.ಇನ್ನು ಬೈಂದೂರು ಭಾಗದ ಅಭಿಮಾನಿಗಳು ಭಾನುವಾರ ನಡೆದ ಬೈಂದೂರು ದೇವಳದ ರಥೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಪು ಪಾನಿಯ ವಿತರಿಸಿ, ಬಿಸಿಲಿನಲ್ಲಿ ಜನರ ಬಾಯಾರಿಕೆ ನಿವಾರಿಸಿದರು. ರಸ್ತೆ ದುರಸ್ತಿ:
ಇನ್ನೂ ವಿಶೇಷ ಎಂದರೆ ವಸ್ರೆ ಗ್ರಾಮದ ಯುವಕರು ತಮ್ಮ ನೆಚ್ಚಿನ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಬಡವರ ಮನೆಯೊಂದನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಿದರು.ಮಂಕಿ ಯುವಕರ ಗ್ರಾಮದ ಸರ್ಕಾರಿ ಶಾಲೆಯ ಮೇಲ್ಛಾವಣಿಯನ್ನು ಮಳೆಗಾಲಕ್ಕೆ ಪೂರ್ವ ದುರಸ್ತಿ ಮಾಡಿ ಸಮಾಜಮುಖಿ ಕೆಲಸದ ಮೂಲಕ ಶಾಸಕರ ಜನುಮದಿನ ಆಚರಿಸಿದರು.
ಶಾಸಕ ಗುರುರಾಜ್ ಗಂಟಿಹೊಳೆಯವರು ಮಾತ್ರ ತೊಂಬಟ್ಟು, ಎಡಮೊಗೆ ಮುಂತಾದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ಕಾಲುಸಂಕಗಳ ಕಾಮಗಾರಿ ಪರಿವೀಕ್ಷಣೆಯಲ್ಲಿ ನಿರತರಾಗಿದ್ದರು.