ಸಾರಾಂಶ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಾರೋಹಳ್ಳಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಾರೋಹಳ್ಳಿ ಸರ್ಕಾರಿ ಬಸ್‌ನಿಲ್ದಾಣದ ವೃತ್ತದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಶಾಸಕ ಇಕ್ಬಾಲ್ ಹುಸೇನ್ ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಪ್ರಸಾದ್‌ಗೌಡ, ಒಕ್ಕಲಿಗರ ನಾಯಕ ಕುಮಾರಸ್ವಾಮಿ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಜನರಿಗೆ ಕುಕ್ಕರ್ ಹಾಗೂ ತವಾ, ಕಾರ್ಡುಗಳ ಮೂಲಕ ಗಿಮಿಕ್ ಮಾಡಿ ಚುನಾವಣೆ ಗೆದ್ದಿದ್ದವರು ಇಕ್ಬಾಲ್ ಹುಸೇನ್‌ರವರಿಗೆ ಎರಡು ಬಾರಿ ಮಾಜಿ ಸಿಎಂ ಆಗಿ ಆಯ್ಕೆಯಾದ ಕುಮಾರಸ್ವಾಮಿಯಂತಹ ಶಕ್ತಿಶಾಲಿ ನಾಯಕರಿಗೆ ಒಬ್ಬ ಶಾಸಕನಾಗಿ ಹೀಗೆ ಕೀಳಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.ಈ ಬಾರಿ ಚುನಾವಣೆಯಲ್ಲಿ ಡಾ.ಮಂಜುನಾಥ್ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಲ್ಲಿಸಲಾಗಿದೆ. ಮಂಜುನಾಥರವರು ವೈದ್ಯರಾಗಿ ಜಯದೇವ ಆಸ್ಪತ್ರೆಯಲ್ಲಿ ಹತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 8.30 ಲಕ್ಷ ಜನರಿಗೆ ಆರೈಕೆ ಮಾಡಿದ್ದಾರೆ. ಅವರ ಸೇವೆ ಮತ್ತು ಜನಪ್ರಿಯತೆಯನ್ನು ಅರಿತು ಒಕ್ಕಲಿಗ ಸಮಾಜದವರು ಈ ಬಾರಿ ಗೆಲ್ಲಿಸಬೇಕು ಎಂದರು.
ಬಿಜೆಪಿ ಮುಖಂಡ ಗೌತಮ್‌ಗೌಡ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಯೋಗೇಶ್ವರ್, ಡಾ ಅಶ್ವತ್ ನಾರಾಯಣ ಬಗ್ಗೆ ಕೀಳುಮಟ್ಟದ ಪದಗಳನ್ನು ಬಳಸುವುದು ಬೇಡ. ಶಾಸಕ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ. ಆ ಗೌರವವನ್ನು ಮೊದಲು ಪಡೆದುಕೊಳ್ಳಿ. ರಾಜಕೀಯದಲ್ಲಿ ಯಾರು ದರ್ಪ, ದುರಹಂಕಾರ, ವೈಷಮ್ಯಗಳನ್ನು ತೋರಿಸಲು ಬರುವುದಿಲ್ಲ, ನಾವು ಮಾಡುವುದು ಜನಸೇವೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಮುರುಳಿಧರ್, ರಾಮ, ಲಕ್ಷ್ಮಣ್, ಚಂದ್ರು, ಶ್ರೀನಿವಾಸ್, ಗಿರೀಶ್, ಕಿಚ್ಚನಕೆರೆ ಜಗದೀಶ್ ಮತ್ತಿತರರು ಭಾಗವಹಿಸಿದ್ದರು.