ಸಾರಾಂಶ
ಇಂದಿನ ವಿದ್ಯಾರ್ಥಿಗಳು ಮುಂದಿನ ನಾಡುಕಟ್ಟುವ ಶಿಲ್ಪಿಗಳು, ಅವರು ಅಭ್ಯಸಿಸುವ ಕೊಠಡಿಗಳು ಸುಸಜ್ಜಿತವಾಗಿರಬೇಕೆಂಬುದು ಸಿಎಂ ನಿಲುವಾಗಿದೆ
ಕನ್ನಡಪ್ರಭ ವಾರ್ತೆ ಕೆರೂರ
ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕ್ಷೇತ್ರದಲ್ಲಿನ ಶಾಲೆಗಗಳ ಕೊಠಡಿಗಳ ದುರಸ್ತಿ ಅವಶ್ಯವಾಗಿದ್ದರಿಂದ ಬಂದ ಅನುದಾನದ ಜೊತೆಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಸುಸಜ್ಜಿತ ಕೊಠಡಿ ನಿರ್ಮಿಸಲಾಗುವುದು ಎಂದು ಬೀಳಗಿ ಶಾಸಕ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.ಜಿಲ್ಲಾಧಿಕಾರಿಗಳ ಕಾರ್ಯಾಲಯ ಬಾಗಲಕೋಟೆ ಕೆಎಸ್ಎಂಸಿಎಲ್‌ನ ಸಿಎಸ್ಆರ್ ಯೋಜನೆಯಡಿ ಬಾದಾಮಿ ತಾಲೂಕಿನ ಅನವಾಲ ಗ್ರಾಮದಲ್ಲಿ ಮಂಜೂರಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಮುಂದಿನ ನಾಡುಕಟ್ಟುವ ಶಿಲ್ಪಿಗಳು, ಅವರು ಅಭ್ಯಸಿಸುವ ಕೊಠಡಿಗಳು ಸುಸಜ್ಜಿತವಾಗಿರಬೇಕೆಂಬುದು ಸಿಎಂ ನಿಲುವಾಗಿದೆ. ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಎಲ್ಲಿ ಶಾಲಾ ಕೊಠಡಿಗಳ ಅಗತ್ಯವಿದೆಯೋ ಅಲ್ಲಿ ಅನುದಾನ ಕೊಡುವ ನಿರ್ಧಾರ ಮಾಡಿದ್ದು, ಗುತ್ತಿಗೆದಾರರು ಬೇಗ ಕಟ್ಟಡ ನಿರ್ಮಿಸಬೇಕು ಮತ್ತು ಶಿಕ್ಷಕರು ಆ ಕಟ್ಟಡ ಸುಭದ್ರವಾಗಿ ರಚನೆಯಾಗುವ ನಿಟ್ಟಿನಲ್ಲಿ ಕಾಮಗಾರಿ ಮೇಲೆ ನಿಗಾ ಇಡಬೇಕೆಂದು ಜೆ.ಟಿ.ಪಾಟೀಲ ಹೇಳಿದರು.
ಶಾಲೆಯಲ್ಲಿ ಅನೇಕ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆಯೆಂಬುದನ್ನು ಶಿಕ್ಷಕರು ಗಮನಕ್ಕೆ ತಂದಿದ್ದು, ಕೊಠಡಿಗಳ ಪರಿಶೀಲನೆಗೆ ಮುಂದಾಗಿ 6 ರಿಂದ 7 ಕೊಠಡಿಗಳು ಕಲಿಕೆಗೆ ಯೋಗ್ಯವಲ್ಲವೆಂದು ಬಾಗಿಲು ಹಾಕಿದ್ದು ತಿಳಿದಿದೆ. ಶಾಲೆಗೆ ಕೊಠಡಿಗಳ ದುರಸ್ತಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಸುಸಜ್ಜಿತ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದು ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್.ಹಳಗೇರಿ ಹಾಗೂ ಗ್ರಾಮಸ್ಥರಿಗೆ ಶಾಸಕರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಗಿರೀಶ ನಾಡಗೌಡ್ರ, ಕಮಲಗೌಡ ಪಾಟೀಲ, ಗದಿಗೆಪ್ಪ ತೊರಗಲ್, ಪ್ರವೀಣ ಚಿಕ್ಕೂರ, ಇಮಾಮಸಾಬ ಮುಲ್ಲಾ, ಬಸವರಾಜ ತಳವಾರ, ಉಪ ತಹಸೀಲ್ದಾರ್ ವೀರೇಶ ಬಡಿಗೇರ, ಕಂದಾಯ ನಿರೀಕ್ಷಕ ಆನಂದ ಭಾವಿಮಠ ಇತರರಿದ್ದರು.