ಕಂಪ್ಲಿ: ಆಳಪುರದಿಂದ ಹಳೆನೆಲ್ಲೂಡಿ ಗ್ರಾಮದವರೆಗೆ ಮೆಟ್ರಿಯಿಂದ ಜವುಕು ರಸ್ತೆ ಹಾಗೂ ಮೆಟ್ರಿಯಿಂದ ಚಿನ್ನಾಪುರ ಗ್ರಾಮತನಕ ತಲಾ ₹3 ಕೋಟಿ ಅನುದಾನದಲ್ಲಿ ₹9 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜೆ.ಎನ್. ಗಣೇಶ್ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ. ಜನರ ಸಂಚಾರ ಸುಗಮವಾಗಲು ಹಾಗೂ ಮೂಲಭೂತ ಸೌಲಭ್ಯಗಳು ಅಭಿವೃದ್ಧಿಯಾಗಲು ಈ ಕಾಮಗಾರಿಗಳು ಸಹಕಾರಿ ಆಗಲಿವೆ. ದೀರ್ಘಕಾಲದಿಂದಲೂ ಹಾಳಾಗಿದ್ದ ಈ ರಸ್ತೆಗಳ ಸಮಸ್ಯೆಯಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದು, ಈಗ ಅವುಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಗ್ರಾಮಸ್ಥರ ಬೇಡಿಕೆಯ ಮೇರೆಗೆ ಉಪ್ಪಾರಹಳ್ಳಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ತಮ್ಮ ಆದ್ಯತೆ ಮುಂದುವರಿಯಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಣೆಗಾಗಿ ಶೀಘ್ರದಲ್ಲೇ ಮೊಬೈಲ್ ಟವರ್ ಅಳವಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ₹110 ಕೋಟಿ ವೆಚ್ಚದಲ್ಲಿ ಶಂಕರಸಿಂಗ್ ಕ್ಯಾಂಪ್, ಶ್ರೀಧರಗಡ್ಡೆ ಹಾಗೂ ಕರ್‍ಲಗುಂದಿ ಪ್ರದೇಶಗಳಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ತರಲು ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಿಸಲಾಗುವುದು. ಈ ಯೋಜನೆಗಳು ರೈತರ ಕೃಷಿಗೆ ಬಹಳ ನೆರವಾಗಲಿದ್ದು, ನೀರಾವರಿ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಒದಗಿಸಲಿದೆ. ಹಿರೇಕೆರೆಯಲ್ಲಿ ನೀರು ತುಂಬಿಸುವ ಯೋಜನೆ ಕೈಗೊಳ್ಳಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಮುಖಂಡರಾದ ಸಿ.ಆರ್. ಹನುಮಂತ, ಕೆ.ಷಣ್ಮುಖ, ನೇಣ್ಕಿ ಗಿರೀಶ, ಹೊನ್ನಳ್ಳಿ ಗಂಗಾಧರ, ಎಚ್.ಕುಮಾರಸ್ವಾಮಿ, ಎಚ್. ಗಂಗಾಧರ, ಎಚ್. ಜಗದೀಶ, ಬಿ. ತಿಮ್ಮಪ್ಪ, ಗಣೇಶ್ ಇದ್ದರು.