ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಕೆ.ಎಸ್‌.ಬಸವಂತಪ್ಪ ಭೇಟಿ

| Published : Jun 20 2024, 01:13 AM IST

ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಕೆ.ಎಸ್‌.ಬಸವಂತಪ್ಪ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆರೋಗ್ಯ ಹದಗೆಟ್ಟರೆ ರೋಗಿಗಳು ಆರೋಗ್ಯ ಕೇಂದ್ರಗಳತ್ತ ದೌಡಾಯಿಸುವುದು ಸಾಮಾನ್ಯ. ಆದರೆ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿ ಇರದಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳ ಗತಿಯೇನು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಗರಂ ಆದರು.

ಮಾಯಕೊಂಡ ಕ್ಷೇತ್ರ ವ್ಯಾಪ್ತಿ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಡಳಿತ ವೈದ್ಯಾಧಿಕಾರಿಗಳು ಕಾಣದಿದ್ದಾಗ, ವೈದ್ಯಾಧಿಕಾರಿಗಳು, ಲ್ಯಾಬ್ ಟೆಕ್ನಿಶಿಯನ್, ವೈದ್ಯರು ಎಲ್ಲಿಗೆ ಹೋಗಿದ್ದಾರೆ ಎಂದು ಸಿಬ್ಬಂದಿಗೆ ಪ್ರಶ್ನಿಸಿದರು. ಕರ್ತವ್ಯದ ಮೇರೆಗೆ ಹೊರಗೆ ಹೋಗಿದ್ದಾರೆ ಎಂದು ನರ್ಸ್‌, ಸಿಬ್ಬಂದಿ ಉತ್ತರಿಸಿದರು.

ಶಾಸಕರು ಭೇಟಿ ನೀಡುವಾಗ ಸ್ಥಳದಲ್ಲಿ ಇರಬೇಕು. ಭೇಟಿ ವೇಳೆ ಇಲ್ಲಿನ ಸಮಸ್ಯೆಗಳು, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳುವವರು ಯಾರು? ಈ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ದಿಢೀರ್ ಭೇಟಿ ನೀಡುತ್ತೇನೆ. ಆಗಲೂ ಇದೇ ರೀತಿ ಕರ್ತವ್ಯ ಲೋಪ ಕಂಡು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನಸಂಖ್ಯೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಔಷಧಿಗಳನ್ನು ಇಂಡೇಟ್ ಆಗಿ ತೆಗೆದುಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಔಷಧಿ ತರಿಸಿಕೊಂಡು ಅವಧಿ ಮೀರಿದ ಮೇಲೆ ತೆಗೆದು ಬಿಸಾಡಿ ಸರ್ಕಾರದ ಹಣ ಪೋಲು ಮಾಡುವುದಲ್ಲ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿಗೆ ಡೆಂಗೀ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ರೋಗಿಗಳ ತಪಾಸಣೆ ಮಾಡಿದ ಪುಸ್ತಕದಲ್ಲಿ 380ಕ್ಕೂ ಹೆಚ್ಚು ಆರ್‌ಬಿಎಸ್ (ಸಕ್ಕರೆ ಕಾಯಿಲೆ) ಇರುವ ರೋಗಿಗಳ ಮಾಹಿತಿ ಇದೆ. ಇಷ್ಟೊಂದು ಆರ್‌ಬಿಎಸ್ ಹೊಂದಿದ್ದರೆ ರೋಗಿಗಳ ಜೀವಕ್ಕೆ ಹಾನಿ. ಹಳ್ಳಿ ಜನರು ಮುಗ್ದರು. ಅವರಿಗೆ ಈ ರೋಗದ ಬಗದಗೆ ಸರಿಯಾದ ಮಾಹಿತಿ ನೀಡಿ, ಅರಿವು ಮೂಡಿಸಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕೆಂದು ಸೂಚನೆ ನೀಡಿದರು.ಸಿಸಿ ಟಿವಿ ಕ್ಯಾಮೆರಾ ಕಳವು:

ಪ್ರಾಥಮಿಕ ಆರೋಗ್ಯ ಕೇಂದ್ರ ಊರ ಹೊರಗೆ ಇರುವುದರಿಂದ ರಾತ್ರಿ ವೇಳೆ ಕಳ್ಳರ ಕಾಟ ಹೆಚ್ಚಾಗಿದೆ. ಈಚೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾ ಕಳವು ಮಾಡಲಾಗಿದೆ ಎಂದು ನರ್ಸ್‌ಗಳು ಶಾಸಕರ ಗಮನಕ್ಕೆ ತಂದರು. ಕೂಡಲೇ ದಾವಣಗೆರೆ ಗ್ರಾಮಾಂತರ ಪಿಎಸ್‌ಐ ದೂರವಾಣಿ ಮೂಲಕ ಸಂಪರ್ಕಿಸಿ ಸಿಸಿ ಟಿವಿ ಕ್ಯಾಮೆರಾ ಕಳವು ಮಾಡಿರುವ ಬಗ್ಗೆ ಮಾಹಿತಿ ನೀಡಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಕೆರೆ ಹೋರಾಟಗಾರ ಹೇಮಂತ್, ಸೋಮಣ್ಣ, ಸಿದ್ದೇಶ್, ಶಿವಣ್ಣ ಸೇರಿದಂತೆ ಇನ್ನಿತರರಿದ್ದರು.